ಓಫಿಡೈಯಿಡೀ
ಸಮುದ್ರದ ಮೀನುಗಳ ಒಂದು ಕುಟುಂಬ. ಓಫೀಡಿಯಾಯ್ಡಿಯ ಉಪಗಣದಲ್ಲಿನ ಮೂರು ಕುಟುಂಬಗಳಲ್ಲಿ ಒಂದು. ಈ ಕುಟುಂಬದ ಮೀನುಗಳು ಅಪ್ಪರ್ ಕ್ರಿಟೀಶಿಯಸ್ ಕಾಲದಿಂದ ಇಂದಿನವರೆಗೂ ಜೀವಂತವಾಗಿವೆ.
ಕಸ್ಕ್ ಈಲ್ (ಒರ್ಬಟ್ ಮೀನನ್ನು ಹೋಲುವ ಹಾವುಮೀನು) ಗಳೆಂದು ಕರೆಯುವ ಈ ಕುಟುಂಬದಲ್ಲಿ ಸು.೩೦ ಪ್ರಭೇದಗಳನ್ನು ಗುರುತಿಸಲಾಗಿದೆ. ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳ ಉಷ್ಣ ಮತ್ತು ಸಮಶೀತೋಷ್ಣ ವಲಯ ಪ್ರದೇಶಗಳಲ್ಲಿ ಮಾತ್ರ ಇವು ಹೆಚ್ಚಾಗಿ ದೊರೆಯುವುವು.
ಓಫಿಡೈಯಿಡೀ ಕುಟುಂಬದ ಮೀನುಗಳು ಸಾಮಾನ್ಯವಾಗಿ 12 ಅಂಗುಲಕ್ಕಿಂತಲೂ ಹೆಚ್ಚು ಬೆಳೆಯುವುದಿಲ್ಲ. ಆದರೆ ದೊಡ್ಡ ಗಾತ್ರಕ್ಕೆ ಬೆಳೆಯುವ ಕೆಲವು ಪ್ರಭೇದಗಳೂ ಉಂಟು. ದಕ್ಷಿಣ ಆಫ್ರಿಕದ ನೆರೆಯ ಸಮುದ್ರಗಳಲ್ಲಿನ ಕಿಂಗ್ಕ್ಲಿಪ್ 5 ಅಡಿಯಷ್ಟು ಉದ್ದ ಬೆಳೆಯುವುದು. ಈ ಮೀನು ಬಹಳ ರುಚಿಕರವೆಂದು ಹೆಸರಾಗಿದೆ. ಈ ಕುಟುಂಬದ ಇನ್ನೆರಡು ಪ್ರಭೇದಗಳು ಪೆರು ದೇಶದ ಸಮುದ್ರದ ಮೀನುಗಾರಿಕೆಯಲ್ಲಿ ಮುಖ್ಯವಾದುವು. ಈ ಎರಡು ಪ್ರಭೇದಗಳ ಮೀನುಗಳು 21/2 ಅಡಿ ಉದ್ದ ಬೆಳೆಯುವುವು. ಈ ಮೀನುಗಳು ಸಾಮಾನ್ಯವಾಗಿ ಆಳವಾದ ಸಮುದ್ರದಲ್ಲಿ ಮಾತ್ರ ದೊರಕುವುವಾದರೂ ಕೆಲವೊಮ್ಮೆ ನದೀಮುಖಗಳಲ್ಲಿಯೂ ಸಮುದ್ರದ ಅಂಚಿನಲ್ಲಿಯೂ ಸಿಕ್ಕಿವೆ.
ಈ ಮೀನಿನ ದೇಹ ಪಕ್ಕದಿಂದ ಪಕ್ಕಕ್ಕೆ ಚಪ್ಪಟೆಯಾಗಿ ತೆಳುವಾಗಿರುವುದು. ಬೆನ್ನಿನ ಮತ್ತು ಗುದದ ರೆಕ್ಕೆಗಳು (ಅಥವಾ ಈಜುರೆಕ್ಕೆ) ತಲೆಯ ಹಿಂಭಾಗದಲ್ಲಿ ಪ್ರಾರಂಭವಾಗಿ ಬಾಲದ ಕೊನೆಯವರೆಗೆ ವ್ಯಾಪಿಸಿದ್ದು ಅನೇಕ ರೆಕ್ಕೆಗಳನ್ನು ಹೊಂದಿರುವುವು. ಈ ಕುಟುಂಬದ ಮೀನುಗಳನ್ನು ಗುರುತಿಸಲು ಸಹಾಯಕವಾದ ಅತಿ ಪ್ರಮುಖ ಲಕ್ಷಣವೆಂದರೆ ಪಕ್ಕೆಯ ಈಜುರೆಕ್ಕೆಗಳು. ಇವು ದೇಹದ ಮುಂಭಾಗದವರೆಗೂ (ಗಡ್ಡದಡಿಯಲ್ಲಿ) ಸಾಗಿ ಕೇವಲ ಒಂದು ಜೋಡಿ ಸೀಳಿದ ತಂತುಗಳಾಗಿ ಮಾರ್ಪಟ್ಟಿವೆ. ಅತಿಸೂಕ್ಷ್ಮವಾದ ಈ ತಂತುಗಳನ್ನು ಮೀನು ಸಮುದ್ರದ ತಳದಲ್ಲಿ ಚಲಿಸುವಾಗ ಕೆಳಭಾಗದಲ್ಲಿನ ಪರಿಸ್ಥಿತಿಯನ್ನು ಗ್ರಹಿಸಲು ಉಪಯೋಗಿಸುವುದು.
ಕ್ಯಾಲಿಫೋರ್ನಿಯದ ಸ್ವೈನ್ಹಾರ್ಟ್ ಅಕ್ವೇರಿಯಂನ ಕ್ಯೂರೇಟರಾದ ಇ.ಎಸ್.ಹೆರಾಲ್ಡ್ ಈ ಕುಟುಂಬದ ಮೀನೊಂದರ ಬಗ್ಗೆ ಗಮನಾರ್ಹನಾದ ಅಂಶಗಳನ್ನು ಬೆಳಕಿಗೆ ತಂದಿದ್ದಾರೆ. ಕ್ಯಾಲಿಫೋರ್ನಿಯದ ನೆರೆಯ ಸಮುದ್ರದಲ್ಲಿ 600 ಅಡಿ ಆಳದಲ್ಲಿ ಹಿಡಿದ ಚುಕ್ಕಿ ಕಸ್ಕ್‌ಈಲ್ (ಓಟೋಫಿಡಿಯಂ ಟೈಲರಿ) ಮೀನು ಸಾಮಾನ್ಯವಾಗಿ ತನ್ನ ಬಾಲದ ಮೇಲೆ ನಿಲ್ಲುವ ಸ್ವಭಾವದ್ದೆಂದು ಇವರು ತಿಳಿಸಿರುವರು. ಅದು ಬಾಲವನ್ನೆ ಮುಂದಾಗಿ ಮಾಡಿಕೊಂಡು ಪೊಟರೆಗಳಲ್ಲಿ ನುಗ್ಗುವುದೆಂದೂ ಕೇವಲ ತಲೆಯನ್ನು ಮಾತ್ರ ಹೊರಗೆ ನೀಡುವುದೆಂದೂ ತಿಳಿದುಬಂದಿದೆ.
ಓಫಿಡೈಯಿಡೀ ಕುಟುಂಬದ ಮೀನುಗಳು ದಕ್ಷಿಣ ಆಫ್ರಿಕ, ಚಿಲಿ, ಪೆರು ಮತ್ತು ನ್ಯೂಜಿûಲೆಂಡ್ ದೇಶಗಳ ಮೀನುಗಾರಿಕೆಯಲ್ಲಿ ಗಮನಾರ್ಹವಾದುವು. (ಸಿ.ಜಿ.ಕೆ.)