Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ರಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಥವು ಮನುಕುಲದ ಇತಿಹಾಸದಲ್ಲಿ ಚಕ್ರದ ಆವಿಷ್ಕಾರದ ಅನಂತರ ಬಳಕೆಯಾಗುತ್ತ ಬಂದ ಒಂದು ವಾಹನ ವಿಶೇಷ (ಚ್ಯಾರಿಯಟ್). ಶಬ್ದಕಲ್ಪದ್ರುಮ ಗ್ರಂಥದಲ್ಲಿ ರಮ್ಯತೇ ಅನೇಕ ಅತ್ರ ಇತಿ ರಥ ಎಂದು ಹೇಳಿದೆ. ಇದರಲ್ಲಿ ಕುಳಿತು ಆನಂದ ಪಡೆಯುವುದರಿಂದ ರಥ ಎಂದು ಹೆಸರಿಸಲಾಗಿದೆ. ಲೌಕಿಕ ಸಂದರ್ಭದಲ್ಲಿ ಬೇರೆ ಬೇರೆಯ ಉದ್ದೇಶಗಳಿಗೆ ಬಳಕೆಯಾಗುವ ರಥಗಳಿಗೆ ಬೇರೆ ಬೇರೆ ಹೆಸರುಗಳಿವೆ. ಯುದ್ಧಕ್ಕೆ ಬಳಸುವ ರಥಗಳಿಗೆ ಚಕ್ರಿಣಿ, ಶತಾಂಗ, ಸೃಂದನವೆಂದೂ ಕ್ರೀಡಾ ಉದ್ದೇಶಕ್ಕೆ ಬಳಸುವ ರಥಗಳಿಗೆ ಪುಷ್ಯರಥಗಳೆಂದೂ ಪ್ರವಾಸ, ಯಾತ್ರೆಗಳಿಗೆ ಬಳಸುವ ರಥಕ್ಕೆ ಕರ್ಣೀ, ಪ್ರವಹಣ, ಡಯನವೆಂದೂ ದೇವತೆಗಳ ಉತ್ಸವಕ್ಕೆ ಬಳಸುವ ರಥಗಳಿಗೆ ಮರುದ್ರಥಗಳೆಂದೂ ಹೆಸರುಗಳಿವೆ. ಮೊದಮೊದಲು ಉತ್ಸವಾದಿಗಳಿಗೆ ಅಥವಾ ರಾಜರ ಮೆರವಣಿಗೆಗಳಿಗೆ ಬಳಕೆಯಾಗುತ್ತಿದ್ದ ರಥ ಕ್ರಮೇಣ ಯುದ್ಧ, ಸ್ಪರ್ಧೆ ಮತ್ತು ಬೇಟೆ ಇತ್ಯಾದಿ ಉದ್ದೇಶಗಳಿಗೆ ಬಳಕೆಯಾಗತೊಡಗಿತು.

ಪ್ರಾಚೀನ ನಾಗರಿಕತೆಯ ಹಂತದಲ್ಲಿ ಕಂಡುಬರುವ ರಥಗಳ ಕಲ್ಪನೆ ಮತ್ತು ಸ್ವರೂಪಗಳು ಸಾರ್ವತ್ರಿಕವಾದವು. ಕ್ರಿ. ಪೂ. ಸು. 3000 ದ ಹೊತ್ತಿಗೆ ಮೆಸೊಪೊಟೇಮಿಯದಲ್ಲಿ `ರಥ ದ ಕಲ್ಪನೆ, ವಿನ್ಯಾಸ ಉಗಮಗೊಂಡಿತು ಎಂದು ಬಹುಪಾಲು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಉರ್ ಮತ್ತು ಟಟೂಗಳ ಸಂಘರ್ಷಗಳಲ್ಲಿ ಭಾರೀಗಾತ್ರದ ತುಂಬು ಚಕ್ರದ, ಚರ್ಮದ ಹೊದಿಕೆಗಳುಳ್ಳ ರಥಗಳು ಕೆಲವು ಸ್ಮಾರಕಗಳಲ್ಲಿ ಗೋಚರಿಸುತ್ತವೆ.

ರಥ ಎಂದರೆ, ಸಾಮಾನ್ಯವಾಗಿ ಎರಡು ಚಕ್ರಗಳುಳ್ಳ, ಎರಡು ಕುದುರೆಗಳಿಂದ ಎಳೆಯಲಾಗುವ ಲಘುವಾಹನವೆಂದೇ ತಿಳಿಯಲಾಗಿದೆ. ಯುದ್ಧದಲ್ಲಿ ಮೊತ್ತಮೊದಲು ಸುಮೇರಿಯನ್ನರು ಕ್ರಿ.ಪೂ.ಸು. 2900 ರಲ್ಲಿ ರಥವನ್ನು ಬಳಸಿದರು. ಇದನ್ನು ನಾಲ್ಕು ಹೋರಿಗಳು ಅಥವಾ ಕತ್ತೆಗಳು ಎಳೆಯುತ್ತಿದ್ದವು. ಭಾರೀ ಗಾತ್ರದ ನಾಲ್ಕು ಚಕ್ರಗಳು ಭಾರೀ ವಾಹನದಂತೆ ಇದು ಇರುತ್ತಿತ್ತು. ಮರದಿಂದ ತಯಾರಾದ ತುಂಬು ಚಕ್ರ ಹಾಗೂ ಈ ಚಕ್ರಕ್ಕೆ ತಾಮ್ರದ ಪಟ್ಟಿಕೆಗಳನ್ನು ಹೊದಿಸಲಾಗುತ್ತಿತ್ತು. ಸಾರಥಿ ಮತ್ತು ರಥಿಕರು ರಥದಲ್ಲಿ ಸೇರಿಕೊಳ್ಳುವ ವ್ಯವಸ್ಥೆ ಇದ್ದು, ಈಟಿ, ಭರ್ಜಿ ಮತ್ತು ಕೊಡಲಿಗಳಂಥ ಆಯುಧಗಳನ್ನು ಇಟ್ಟುಕೊಳ್ಳಲೂ ಸ್ಥಳಾವಕಾಶ ಇರುತ್ತಿತ್ತು. ಹೈಕ್ಸಸ್‍ಗಳು ಈಜಿಪ್ಟಿಯನ್ನರ ಮೇಲೆ ದಿಗ್ವಿಜಯ ಸಾರುವಾಗ ಇಂಥ ವಾಹನವನ್ನು ಬಳಸಿದರು. ಈಜಿಪ್ಟಿಯನ್ನರಲ್ಲಿ ಯುದ್ಧ, ಯಾತ್ರೆ ಅಥವಾ ಸಾಮಾನ್ಯ ನೋಟಕ್ಕೂ ಇದೇ ಸ್ವರೂಪದ ರಥಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಆರು ಅರೆಕಾಲುಗಳುಳ್ಳ ಎರಡು ಚಕ್ರಗಳು (ಕೆಲವೊಮ್ಮೆ ಎಂಟು ಅಥವಾ ನಾಲ್ಕು ಅರೆಕಾಲುಗಳೂ ಇರಬಹುದು.) ಅಚ್ಚು ಮತ್ತು ಅಡ್ಡಪಟ್ಟಿಕೆಗಳನ್ನು ಕೂರಿಸಿ, ಅಚ್ಚಿನ ಮೇಲೆ ರಥದ ನಿರ್ಮಾಣ ಮಾಡಲಾಗುತ್ತಿತ್ತು. ವೈವಿಧ್ಯಮಯವಾಗಿ ರಥಗಳನ್ನು ಸಿಂಗರಿಸಲಾಗುತ್ತಿತ್ತು. ಯುದ್ಧ ಸಂದರ್ಭಗಳಲ್ಲಿ ರಥಕ್ಕೆ ಹೆಚ್ಚಿನ ನಷ್ಟ ಸಂಭವಿಸುತ್ತಿರಲಿಲ್ಲ. ಅಪರೂಪಕ್ಕೆ ಎಂಬಂತೆ ರಥದ ಹಿಂಬದಿಗೋ ಅಥವಾ ಎಳೆಯುತ್ತಿರುವ ಕತ್ತೆ, ಹೋರಿ, ಕುದುರೆಗಳ ಪಕ್ಕೆಲುಬುಗಳಿಗೋ ಸ್ವಲ್ಪ ಏಟು ಬೀಳುತ್ತಿತ್ತು. ಹೀಗಾಗಿ ರಥದೊಳಗಿನಿಂದಲೇ ಯುದ್ಧ ನಡೆಸುತ್ತಿರಲಿಲ್ಲವೆಂದು ವಿದ್ವಾಂಸರು ಭಾವಿಸಿದ್ದಾರೆ.

ಇದೇ ಮಾದರಿಯ ರಥಗಳು ಚೀನ ಮತ್ತು ಕೆಲವು ಮಧ್ಯಪ್ರಾಚ್ಯ ದೇಶಗಳಲ್ಲಿ ಹೆಚ್ಚು ಕಡಿಮೆ ಇದೇ ಸುಮಾರಿಗೆ ಬಳಕೆಯಾದವು. ವಿಶೇಷವಾಗಿ ಸಿರಿಯ, ಪ್ಯಾಲಸ್ತೀನ್ ಮತ್ತು ಅಸ್ಸೀರಿಯ ದೇಶಗಳಲ್ಲಿ ಗ್ರೀಕ್ ಮತ್ತು ರೋಮನ್ನರ ಪ್ರಭಾವದಿಂದ ರಥಗಳ ಬಳಕೆ ಆರಂಭವಾಯಿತು. ಕೆಲಮಟ್ಟಿಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್‍ಗಳಿಂದಲೂ ಈ ಎಲ್ಲ ರಾಷ್ಟ್ರಗಳಿಗೆ ಯುದ್ಧ ಸಂದರ್ಭದಲ್ಲಿ ರಥಗಳ ಬಳಕೆ ತಿಳಿದುಬಂದಿತೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಕಾಲಾಂತರದಲ್ಲಿ ಗ್ರೀಕರು ಮತ್ತು ರೋಮನ್ನರು ರಥಗಳನ್ನು ಯುದ್ಧದ ಅಂಗವೆಂಬುದನ್ನು ಪರಿಗಣಿಸದೇ, ವಿಶೇಷವಾಗಿ ಮೆರವಣಿಗೆ ಮತ್ತು ಸ್ಪರ್ಧೆಗಳಿಗೆ ರಥಗಳ ಬಳಕೆಯನ್ನು ಸೀಮಿತಮಾಡಿಕೊಂಡರು. ರೋಮ್ ಸಾಮ್ರಾಜ್ಯದ ಸಾಮ್ರಾಟರು ಹತ್ತಕ್ಕಿಂತ ಹೆಚ್ಚು ಕುದುರೆಗಳು ಎಳೆಯುತ್ತಿದ್ದ ರಥಗಳಲ್ಲಿ ಕುಳಿತು ವಿಜಯೋತ್ಸವ ನಡೆಸುತ್ತಿದ್ದರು ಎಂಬುದಾಗಿ ತಿಳಿದುಬರುತ್ತದೆ.

ಟೈಗ್ರೀಸ್ ನದಿಯ ಸಮೀಪದಲ್ಲಿರುವ ಪ್ರಾಚೀನ ಅಸ್ಸೀರಿಯದ ನಗರ ಕಾಲಾಕ್ ಎಂಬಲ್ಲಿ ದೊರೆತ ಉಬ್ಬುಶಿಲ್ಪ. ಯುದ್ಧರಥಾರೂಢರಾಗಿರುವ ಬಿಲ್ಲುಗಾರರನ್ನು ಈ ಶಿಲ್ಪದಲ್ಲಿ ಕಾಣಬಹುದು.

ರಥಗಳ ಬೆಳೆವಣಿಗೆಯ ಹಂತ ಕೂಡ ಕುತೂಹಲಕರವಾದುದು. ಪ್ರಾರಂಭಿಕ ಹಂತದಲ್ಲಿ ತುಂಬು ಚಕ್ರಗಳ ಭಾರೀ ರಥಗಳನ್ನು ನಾಲ್ಕಾರು ಕತ್ತೆ ಹೋರಿಗಳು ಎಳೆಯುತ್ತಿದ್ದುದನ್ನು ನೋಡಿದರೆ ಕ್ರಿ.ಪೂ.ಸು. 1500ರ ವೇಳೆಗೆ ಕಂಡುಬರುವ ಅರೆಕಾಲುಗಳುಳ್ಳ ಚಕ್ರದ ಶೋಧನೆ. ಎರಡು ಚಕ್ರಗಳ ರಥದ ಆವಿಷ್ಕಾರಕ್ಕೆ ಕಾರಣವಾಯಿತು. ಇದರಿಂದ ರಥದ ಸ್ವರೂಪ ಸರಳವಾಯಿತು. ಗಾತ್ರವೂ ಕಿರಿದಾಗಿ ಹಗುರ ಪ್ರಮಾಣದ ರಥನಿರ್ಮಾಣ ಮೊದಲಾಯಿತು. ಈ ಎಲ್ಲ ಬೆಳೆವಣಿಗೆಗಳು ಮತ್ತು ಬದಲಾವಣೆಗಳು ರಥದ ಚಲನೆಯ ವೇಗವನ್ನು ಹೆಚ್ಚಿಸಿದವು. ವೇಗವರ್ಧನೆ ರಥವನ್ನು ಸಮರ ಸಂದರ್ಭದಲ್ಲಿ ಹೆಚ್ಚು ಉಪಯುಕ್ತಗೊಳಿಸಿತು. ಕ್ರಿ.ಪೂ.ಸು. 2000ದ ವೇಳೆಗೆ ಕತ್ತೆ, ಹೋರಿಗಳ ಬದಲಿಗೆ ಕುದುರೆಗಳನ್ನು ಬಳಸಿದ್ದು ರಥಗಳ ಅಭಿವೃದ್ಧಿ ಅಥವಾ ಬೆಳೆವಣಿಗೆಯಲ್ಲಿ ಗುರುತಿಸಬಹುದಾದ ಅಂತಿಮ ಹಂತ. ಇದರಿಂದಾಗಿ ರಥಗಳ ಚಲನೆಯ ವೇಗ ಇನ್ನೂ ಹೆಚ್ಚಾಯಿತು. ರಥಗಳಲ್ಲಿ ಕಂಡುಬಂದ ಈ ಬೆಳೆವಣಿಗೆ ಕ್ರಿ.ಪೂ. 2000ದಲ್ಲಿ ಹೈಕೂಗಳು ಈಜಿಪ್ಟಿಯನ್ನರ ಮೇಲೂ ಹಿಟ್ಟೇಗಳು ಅನಾತೋಲಿಯಾ ಮೇಲೂ ಉತ್ತರ ಭಾರತದ ಮೇಲೆ ಆರ್ಯನ್ನರೂ ಗ್ರೀಸ್ ದೇಶದ ಮೇಲೆ ಮೈಸೀನಿಯನರೂ ದಿಗ್ವಿಜಯ ಸಾಧಿಸಲು ಮೂಲ ಕಾರಣಗಳಲ್ಲೊಂದಾಯಿತು.

ಕ್ರಿ.ಪೂ. 5ನೆಯ ಶತಮನದ ವೇಳೆಗೆ ಕೆಲ್ಟ್‍ರಿಗೆ ರಥದ ಪರಿಚಯವಾಯಿತು. ಕೆಲ್ಟ್‍ರ ರಥಗಳು ಗ್ರೀಕ್ ರಥಗಳಿಗಿಂತ ತುಂಬು ಚಕ್ರಗಳ ಭಾರೀಸ್ವರೂಪದವು. ಇದರ ಸಾಮ್ರಾಜ್ಯ ಪತನಗೊಂಡ ಮೇಲೂ ಅಂದರೆ ಕ್ರಿ.ಶ. ಸು. 4ನೆಯ ಶತಮಾನದವರೆಗೂ ರಥದ ಬಳಕೆ ಕಂಡುಬರುತ್ತದೆ. ರಥಗಳು ತಮ್ಮ ಜನಪ್ರಿಯತೆಯನ್ನು ಎಂದಿಗೂ ಕಳೆದುಕೊಳ್ಳಲಿಲ್ಲ. ಆಧುನಿಕ ತಂತ್ರಜ್ಞಾನ ಜಗತ್ತಿನಲ್ಲಿ ಆವಿಷ್ಕಾರಗೊಂಡ ಛಾವಣಿ (ಟಾಪ್) ರಹಿತ ನಾಲ್ಕು ಚಕ್ರಗಳ ಕಾರು, ಜೀಪು ಮೊದಲಾದ ವಾಹನಗಳನ್ನು ಯುರೋಪಿನಲ್ಲಿ ತೀರ ಇತ್ತೀಚಿನವರೆಗೂ 'ಚ್ಯಾರಿಯಟ್ ಎಂದೇ ಕರೆಯುತ್ತಿದ್ದುದನ್ನು ಗಮನಿಸಬಹುದು.

ಭಾರತೀಯ ಪರಂಪರೆಯಲ್ಲಿ ರಥಗಳು ವೇದಗಳ ಕಾಲದಲ್ಲೇ ಕಂಡುಬರುತ್ತವೆ. ಋಗ್ವೇದದ ಆರನೆಯ ಮಂಡಲದ ಕೊನೆಯ ಸೂಕ್ತಗಳಲ್ಲಿ ಯುದ್ಧ ಮತ್ತು ಯುದ್ಧದಲ್ಲಿ ಬಳಸುತ್ತಿದ್ದ ಆಯುಧಗಳ ವರ್ಣನೆ ಇದೆ. ಬಿಲ್ಲುಬಾಣಗಳು ಮುಖ್ಯ ಆಯುಧಗಳಾಗಿದ್ದವು. ಬಾಣಗಳಿಗೆ ಮೂಲಿಕೆಗಳ ವಿಷವನ್ನು ಸವರಲಾಗುತ್ತಿತ್ತು. ಇದರಿಂದ ತಪ್ಪಿಸಿಕೊಳ್ಳು ಲೋಹನಿರ್ಮಿತ ಕವಚ ಧರಿಸುತ್ತಿದ್ದರು. ರಥದ ಒಳಗಿನಿಂದಲೇ ಯುದ್ಧಮಾಡುತ್ತಿದ್ದರು. ಸ್ವತಃ ರಾಜನೇ ಯುದ್ಧ ಮಾಡುತ್ತಿದ್ದ. ರಾಜನ ರಕ್ಷಣೆಗೆ ಅಂಗರಕ್ಷಕರ ಒಂದು ಗುಂಪೇ ಇರುತ್ತಿತ್ತು. ಇವರನ್ನು 'ರಥ ಗೋಪ ರೆಂದು ಕರೆಯುತ್ತಿದ್ದರು. ಕುದುರೆ, ರಥ ಮತ್ತು ಭಟರ ಉಲ್ಲೇಖವನ್ನು ವೇದದಲ್ಲಿ ಕಾಣುತ್ತೇವೆ. ಆನೆ ಮತ್ತು ಕತ್ತಿಗಳ ಬಳಕೆಯನ್ನು ಹೇಳಿಲ್ಲ. ಶತ್ರುಗಳನ್ನು ಸೋಲಿಸಿ ಧನಕನಕಾದಿಗಳನ್ನು ಹೇರಿಕೊಂಡು ಬಂದ ರಥಗಳಿಗೆ ಪೂಜೆ ಮತ್ತು ಸ್ತುತಿಗಳು ನೆಯುತ್ತಿದ್ದ ಬಗ್ಗೆ ವೇದಗಳಲ್ಲಿ ಉಲ್ಲೇಖವಿದೆ. ಸೂರ್ಯನ ರಥದ ವರ್ಣನೆಯೂ ವೇದಗಳಲ್ಲಿ ಕಂಡುಬರುತ್ತದೆ. ಸೂರ್ಯನ ರಥದ ಕುದುರೆ, ಅಚ್ಚು, ತೀರಿ, ಚಕ್ರ ಮತ್ತು ಚಕ್ರದ ಅರೆಕಾಲು ಇತ್ಯಾದಿ ರಥದ ಪ್ರತಿಯೊಂದು ಭಾಗವನ್ನು ಕಿರಣ, ಅಯನ, ಸಂವತ್ಸರ ಹಾಗೂ ತ್ರಿಕಾಲಗಳು ಇತ್ಯಾದಿಗಳಿಗೆ ಆರೋಪಿಸಲಾಗಿದೆ. ಮಹಾಕಾವ್ಯ ಮತ್ತು ಪುರಾಣಾದಿಗಳಲ್ಲಿ ರಥಗಳಿಗೆ ಸಂಬಂಧಿಸಿದಂತೆ ಹೇರಳ ಮಾಹಿತಿ ಲಭ್ಯವಾಗುತ್ತದೆ. ವಿಷ್ಣುಧರ್ಮೋತ್ತರ ಪುರಾಣದಲ್ಲಿ ನವಗ್ರಹಗಳ ವೈವಿಧ್ಯಮಯವಾದ ರಥಗಳ ವರ್ಣನೆಯೂ ಅವುಗಳ ಚಲನೆಯೂ ಪ್ರಸ್ತಾಪವಾಗಿದೆ.

ಪಾಶ್ಚಾತ್ಯ ಅಥವಾ ಪೌರಾತ್ಯ ಮಹಾಕಾವ್ಯಗಳಲ್ಲಿ ರಥಗಳ ಪ್ರಸ್ತಾಪ ಸಾಮಾನ್ಯವಾದುದು. ಹೋಮರನ ಇಲಿಯಡ್ ಗ್ರಂಥದಲ್ಲಿನ (ಬುಕ್ ಘಿಘಿIII) ಪೆಟ್ರಾಕ್ಲಸ್‍ನ ಅಂತ್ಯಸಂಸ್ಕಾರದ ಸಂದರ್ಭವನ್ನು ಇಲ್ಲಿ ನೆನೆಯಬಹುದು. ವರ್ಜಿಲನ ಈನಿಯಡ್ ಕೃತಿಯಲ್ಲಿಯೂ ರಥದ ಪ್ರಸ್ತಾಪ ಬರುತ್ತದೆ. ಭಾರತೀಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಕೃತಿಗಳಲ್ಲಿ ರಥಗಳ ಪ್ರಸ್ತಾಪವಂತೂ ತೀರ ಸಾಮಾನ್ಯವಾಗಿದೆ. ರಥ ನಡೆಸುವ ಕೆಲಸ ಸುಲಭದ್ದೇನೂ ಆಗಿರಲಿಲ್ಲವೆಂದು ಕಂಡುಬರುತ್ತದೆ. ಹತ್ತು ದಿಕ್ಕಗಳಲ್ಲಿಯೂ ರಥ ನಡೆಸುವ ಸಾಮಥ್ರ್ಯವಿದ್ದುದರಿಂದ ಅಯೋಧ್ಯೆಯ ರಾಜನಿಗೆ ದಶರಥನೆಂದು ಹೆಸರು ಬಂದಿತೆಂದು ರಾಮಾಯಣ ಮಹಾಕಾವ್ಯದಿಂದ ತಿಳಿಯುತ್ತದೆ. ಕೃಷ್ಣ, ಶಲ್ಯ ಇವರೆಲ್ಲ ಮಹಾರಥಿಗಳಾಗಿದ್ದರೆಂದು ಮಹಾಭಾರತದಲ್ಲಿ ಹೇಳಿದೆ. ಅವರ ರಥ ಚಾಲನೆಯ ಶಕ್ತಿಗೆ ಅನುಗುಣವಾಗಿ ಅರ್ಧರಥಿ, ಮಹಾರಥಿ, ಸಮರಥಿ ಇತ್ಯಾದಿಯಗಿ ಸಂಭೋಧನೆಗಳು ಗೌರವರೂಪದಲ್ಲಿ ಸೂಚಿತವಾಗಿದೆ. ಇಂದ್ರನ ರಥಧ ಸಾರಥಿ ಮಾತಲ್ಲಿ. ಸೂರ್ಯನ ರಥದ ಸಾರಥಿ ಅರುಣ ಪುರಾಣಪ್ರಸಿದ್ಧರು. ಮಹಾಕಾವ್ಯಗಳನ್ನು ಆಕರ ಮಾಡಿಕೊಂಡು ಹುಟ್ಟಿದ ಬಹುತೇಕ ಕೃತಿಗಳಲ್ಲಿ ರಥಗಳ ಉಲ್ಲೇಖವನ್ನು ಕಾಣಬಹುದು. ಕನ್ನಡದಲ್ಲಿ ಪಂಪ, ರನ್ನ, ಕುಮಾರವ್ಯಾಸರ ಕಾವ್ಯಗಳಲ್ಲಿ ಸಮರ ರಥಗಳ ವರ್ಣನೆ ಬಹು ಸುಂದರವಾಗಿ ಮೂಡಿಬಂದಿದೆ. ಮಹಾಕಾವ್ಯಗಳಲ್ಲಿ ಕಂಡುಬರುವ ರಥಗಳ ವರ್ಣನೆ ವಿಶೇಷವಾಗಿ ಸಮರದ ಸಂದರ್ಭಕ್ಕೆ ಸಂಬಂಧಿಸಿದುದು ಎಂಬುದು ಗಮನಿಸಬೇಕಾದ ಅಂಶ.

ಮಾನಸಾರವೆಂಬ ಕೃತಿಯಲ್ಲಿ ರಥಗಳ ವಿಧ, ರಚನೆ, ಕ್ರಮ ಇತ್ಯಾದಿಗಳ ಬಗ್ಗೆ ಸವಿಸ್ತಾರವಾಗಿ ಹೇಳಲಾಗಿದೆ. ಶಿಲ್ಪರತ್ನಾಕರ, ರುದ್ರವಾಸ್ತು, ಪರಾಶರವಾಸ್ತು ಈ ಮೊದಲಾದ ವಾಸ್ತುಶಿಲ್ಪ ಸಂಬಂಧೀ ಗ್ರಂಥಗಳಲ್ಲಿ ರಥಗಳ ಬಗ್ಗೆ ಉಲ್ಲೇಖಗಳು ವಿಶೇಷವಾಗಿ ದೊರಕುತ್ತವೆ. ಇಲ್ಲೆಲ್ಲ ಪುಷ್ಪಕರಥ, ವಿಮಾನರಥ, ಸೋಮ್ಯರಥ, ವಿದ್ಯಾಧರರಥ, ಸ್ಕಂದನರಥ, ಗಂಧರ್ವರಥ, ಸುರಪುಷ್ಪಕರಥಗಳೆಂದು ವಿವಿಧ ರಥಗಳನ್ನು ಹೆಸರಿಲಾಗಿದೆ. ದೇವತೆಗಳಿಗೆ, ಬ್ರಾಹ್ಮಣರಿಗೆ, ಕ್ಷತ್ರಿಯರಿಗೆ ಬೇರೆ ಬೇರೆಯ ರಥಗಳಿದ್ದುವೆಂದೂ ತಿಳಿದುಬರುತ್ತದೆ. ಹಾಗೆಯೇ ಬೇರೆ ಬೇರೆಯ ದೇವತೆಗಳಿಗೆ ಬೇರೆ ಬೇರೆಯ ರಥಗಳನ್ನು ಹೇಳಲಾಗಿದೆ. ರಥದ ಚಕ್ರವನ್ನು ತಯಾರಿಸಲು ಗಟ್ಟಿಯಾದ ಕೆಲವು ಮರಗಳನ್ನು ಹೇಳಲಾಗಿದೆ. ನಾಲ, ಜಂಬುಕ, ಸಾರ, ಸರಲ, ಅರ್ಜುನ, ಮಧೂಕ, ತಿಂತಿಡಿ, ಬುದ್‍ಬುದ, ವ್ಯಾಷ್ಟಿ, ಕ್ಷೀರಿಣಿ, ಖದಿರ, ಕೃಕರ, ಕೃತಮೂಲ, ಶಮಿ ಮುಂತಾದ ವಿಶಿಷ್ಟ ಜಾತಿಯ ಮರಗಳು ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಯುದ್ಧರಥಕ್ಕೆ ಮೂರು ಚಕ್ರಗಳಿರಬೇಕು; ಅಣಕುಯುದ್ಧ, ಪಂದ್ಯಗಳಲ್ಲಿ ನಾಲ್ಕು ಚಕ್ರಗಳ ರಥವಿರಬೇಕು; ನಿತ್ಯ ಬಳಕೆಯ ಸಾಮಾನ್ಯ ರಥಕ್ಕೆ ಐದು ಚಕ್ರಗಳು ಇರಬೇಕು ಎಂದು ಮಾನಸಾರ ಗ್ರಂಥದಲ್ಲಿ ಉಲ್ಲೇಖವಾಗಿದೆ.

ರಥಗಳಿಗೆ ಸಂಬಂಧಿಸಿದಂತೆ ಕಾವ್ಯಾದಿಗಳಲ್ಲಿ ಮಾತ್ರವಲ್ಲ. ಕೆಲವು ಉತ್ಖನನಗಳಲ್ಲಿಯೂ ಆಧಾರಗಳು ದೊರಕಿವೆ. ಸಿಂಧೂಬಯಲಿನ ನಾಗರಿಕತೆಯಲ್ಲಿ ರಥಗಳಿಗೆ ಸಂಬಂಧಿಸಿದ ಅನೇಕ ಕುರುಹುಗಳಿವೆ. ಪಕ್ಷಿರಥಗಳು, ಮಣ್ಣಿನ ಚಕ್ರಗಳು, ಆಟದ ಬಂಡಿಗಳು ಇಲ್ಲಿ ಲಭ್ಯವಾಗಿವೆ. ಚೀನದಲ್ಲಿಯೂ ಇಂಥ ಕುರುಹುಗಳು ದೊರಕಿವೆ. ಬೀಜಿಂಗ್‍ನ ಲಿಯಾ-ಲಿ-ಹೋ ಎಂಬಲ್ಲಿ ಹೂತುಹೋಗಿದ್ದ ಕ್ರಿ.ಪೂ.ಸು. 300ರ ಕಾಲಕ್ಕೆ ಸೇರಿದ ರಥವೊಂದನ್ನು ಪತ್ತೆಹಚ್ಚಲಾಗಿದೆ.

ರಥಗಳು ದೇವಾಲಯಗಳ ಅವಿಭಾಜ್ಯ ಅಂಗಗಳೆನಿಸಿವೆ. ಆಯಾ ದೇವತೆಗಳ ವಿಶೇಷ ಉತ್ಸವಾದಿಗಳಲ್ಲಿ ರಥೋತ್ಸವ ಸಾಮಾನ್ಯವಾಗಿ ಕಂಡುಬರುತ್ತದೆ. ಪುರಿಯ ಜಗನ್ನಾಥ ದೇವಾಲಯದ ರಥೋತ್ಸವ ಜಗತ್ಪ್ರಸಿದ್ಧವಾದುದು. ದೇವಾಲಯಗಳ ಶಿಲ್ಪ ಮತ್ತು ವಾಸ್ತುವಿನ ಮೇಲೆ ರಥಗಳ ಕೆತ್ತನೆಗಳು ಅಲ್ಲಲ್ಲಿ ಕಂಡುಬರುತ್ತವೆ. ಹನ್ನೆರಡನೆಯ ಶತಮಾನದ ಚೋಳರ ಶಿಲ್ಪಕಲೆಗೆ ಉತ್ತಮ ನಿದರ್ಶನವಾದ ತಂಜಾವೂರಿನ ಐರಾವತೇಶ್ವರ ಗುಡಿಯ ಅಲಂಕಾರ ಮಂಟಪ ಒಂದು ರಥದ ಆಕಾರದಲ್ಲಿಯೇ ಇದೆ. ಎಂಟು ಗ್ರಹಗಳಿಂದ ಸುತ್ತುವರೆದ ಕಮಲದ ಹೂವಿನ ಮುಖವುಳ್ಳ ಸೂರ್ಯ ಏಳು ಕುದುರೆಗಳು ಎಳೆಯುತ್ತಿರುವ ರಥದಲ್ಲಿ ಕುಳಿತಿರುವುದನ್ನು ತಿರುಚನಾಪಳ್ಳಿಯ ಗಂಗೈಕೊಂಡ ಚೋಳಪುರದ ಬೃಹದೇಶ್ವರ ದೇವಾಲಯದಲ್ಲಿ ಕೆತ್ತಲಾಗಿದೆ. ಪಲ್ಲವರ ಬಂದರಾಗಿದ್ದ ಮಹಾಬಲಿಪುರದಲ್ಲಿ ದ್ರಾವಿಡ ಶಿಲ್ಪಶೈಲಿಯ ಮಂಟಪಗಳಿವೆ. ಇವುಗಳನ್ನು ರಥಗಳೆಂದೇ ಕರೆಯಲಾಗುತ್ತದೆ. ಅಂತಸ್ತುಗಳಿಂದ ಕೂಡಿ ಪಿರಮಿಡ್‍ನ ಆಕಾರದಲ್ಲಿರುವ ಮಂಟಪವನ್ನು ಧರ್ಮರಾಯನ ರಥವೆಂದೂ ಶಿಖರಗಳಿಂದ ಕೂಡಿದ್ದು ಕಲಾತ್ಮಕ ಕೆತ್ತನೆಗಳಿರುವ ಮಂಟಪಗಳನ್ನು ಅರ್ಜುನ, ಭೀಮ, ನಕುಲ, ಸಹದೇವರ ರಥಗಳೆಂದೂ ಹುಲ್ಲಿನ ಜೋಪಡಿಯಂತೆ ಕಾಣುವ ಮಂಟಪವೊಂದನ್ನು ದ್ರೌಪದಿಯ ರಥವೆಂದೂ ಕರೆಯುತ್ತಾರೆ. ಈ ಮಂಟಪಗಳನ್ನು ದೇವಾಲಯಗಳೆಂದೇ ಗುರುತಿಸಿರುವುದೂ ಒಂದು ವಿಶೇಷ. ಹಂಪೆಯ ಕಲ್ಲಿನರಥವಂತೂ ವಿಶಿಷ್ಟವಾದುದು. ಜಗತ್ಪ್ರಸಿದ್ಧವಾದುದು.

ರಥಗಳನ್ನು ಮನರಂಜನೆಗೆ ಬಳಸುವುದು, ಸ್ಪರ್ಧೆಗಳೀಗೆ ಬಳಸುವುದು ಇತಿಹಾಸ ಕಾಲದಿಂದಲೂ ಕಂಡುಬರುವ ಒಂದು ಸಾಮಾನ್ಯ ಅಂಶ. ಭಾರತೀಯರಲ್ಲಿ ಕ್ರೀಡಾ ರಥಗಳನ್ನು ಪುಷ್ಯರಥವೆಂಬ ಹೆಸರಿನಿಂದ ಕರೆದಿರುವುದನ್ನೂ ಪಂದ್ಯಗಳಲ್ಲಿ ಬಳಸುವ ರಥಕ್ಕೆ ನಾಲ್ಕು ಚಕ್ರಗಳು ಇರಬೇಕು ಎಂದಿರುವುದನ್ನೂ ಗಮನಿಸಿದರೆ ರಥದ ಕ್ರೀಡೆ ಮತ್ತು ಪಂದ್ಯಗಳ ನಮ್ಮಲ್ಲಿಯೂ ನಡೆಯುತ್ತಿತ್ತು ಎಂದು ತಿಳಿಯಬಹುದಾಗಿದೆ. ಆದರೆ ರಥ ಓಟ ಸ್ಪರ್ಧೆಗಳಿಗೆ ಗ್ರೀಕ್ ಮತ್ತು ರೋಮನ್ನರು ನೀಡಿದ ಪ್ರಾಶಸ್ತ್ಯ ಭಾರತೀಯ ಪರಂಪರೆಯಲ್ಲಿ ಕಂಡುಬರುವುದಿಲ್ಲವೆನ್ನಬಹುದು. ರಥ ಸ್ಪರ್ಧೆ ಪ್ರಾಚೀನ ಗ್ರೀಕರ ಮತ್ತು ರೋಮನ್ನರ ಮೆಚ್ಚಿನ ಕ್ರೀಡೆಯೇ ಆಗಿತ್ತು. ಸಾಮ್ರಾಜ್ಯಕ್ಕೆ ಆಗಮಿಸಿದ ಅತಿಥಿಗಳ ಸಂತೋಷಕೂಟದಲ್ಲಿ ಹಾಗೂ ಸಾಮ್ರಾಟರ ಸಿಂಹಾಸನಾರೋಹಣ ಸಂದರ್ಭಗಳಲ್ಲಿ ರಾಜನ ಗೌರವಾರ್ಥ ಏರ್ಪಡಿಸುತ್ತಿದ್ದ ರಥ ಸ್ಪರ್ಧೆಗಳು ವಿಶೇಷವಾಗಿರುತ್ತಿದ್ದವು. ಗ್ರೀಕ್ ಕವಿ ಹೋಮರನ ಇಲಿಯಡ್ ಕೃತಿಯಲ್ಲಿ ಈ ಪಂದ್ಯಗಳ ವರ್ಣನೆ ಅಲ್ಲಲ್ಲಿ ಬರತ್ತವೆ. ರೋಮ್ ನಗರದಲ್ಲಿ ವೃತ್ತಿಪರ ಸ್ಪರ್ಧಿಗಳಿದ್ದು ಪಂದ್ಯಗಳಲ್ಲಿ ಗುಂಪು ಗುಂಪಾಗಿ ನೆರೆಯುತ್ತಿದ್ದರು. ಅವರು ದಿನಕ್ಕೆ ಕನಿಷ್ಠವೆಂದರೂ ಇಪ್ಪತ್ತು ಬಾರಿ ನಾಲ್ಕರಿಂದ ಹನ್ನೆರಡು ಪ್ರತಿಸ್ಪರ್ಧಿ ತಂಡಗಳೊಂದಿಗೆ ಸಾಮಾನ್ಯವಾಗಿ ನಾಲ್ಕು ಕುದುರೆಗಳ ರಥದಲ್ಲಿ ಸ್ಪರ್ಧಿಸಬಲ್ಲವರಾಗಿದ್ದರು. ಬಿಳಿ, ಕೆಂಪು, ನೀಲಿ ಮತ್ತು ಹಸುರು ಬಣ್ಣಗಳಿಂದ ಸ್ಪರ್ಧಾಳುಗಳನ್ನು ಗುರುತಿಸಲಾಗುತ್ತಿತ್ತು. ಆಯಾ ಗುಂಪಿಗೆ ಹುರುಪು ಉತ್ಸಾಹ ತುಂಬುತ್ತಿದ್ದ ಪ್ರೇಕ್ಷಕರು ತಮ್ಮ ಅಭಿಮಾನೀ ಸ್ಪರ್ಧಿಗಳ ಬಣ್ಣದ ಬಾವುಟಗಳನ್ನು ತೋರುತ್ತ ಸಂಭ್ರಮ ಪಡುತ್ತಿದ್ದರು. ಸ್ಪರ್ಧೆಯಲ್ಲಿ ಪಣಗಳೂ ಇರುತ್ತಿದ್ದವು. ಕಟ್ಟುನಿಟ್ಟಿನ ನೀತಿ ನಿಯಮಾವಳಿಗಳೂ ಇರುತ್ತಿದ್ದವು. ನೀತಿ, ನಿಯಮಗಳನ್ನು ಮೀರುವ ಸ್ಪರ್ಧಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಪ್ರೇಕ್ಷಕರಿಗೂ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು.

ಒಲಂಪಿಕ್ ಕ್ರೀಡೆಯಲ್ಲಿ ರಥಸ್ಪರ್ಧೆ ಕ್ರಿ.ಪೂ. 776ರಲ್ಲಿಯೇ ಆರಂಭವಾಯಿತು. ಒಲಂಪಿಕ್ ಸ್ಪರ್ಧೆ ಪ್ರಾರಂಭವಾದ ನಾಲ್ಕು ದಿನಗಳ ತರುವಾಯ ರಥಸ್ಪರ್ಧೆ ಇರುತ್ತಿತ್ತು. ಸ್ಪರ್ಧೆಗೆ ಐದು ಮೈಲುಗಳ ಉದ್ದದ ಏಳು ಸುತ್ತುಗಳನ್ನು ನಿಗದಿಗೊಳಿಸಲಾಗಿತ್ತು. ಗೆದ್ದವರಿಗೆ ವಿಶೇಷ ಮಾನಸನ್ಮಾನಗಳು ಸಂಭ್ರಮ ಸಡಗರಗಳಿಂದ ನಡೆಯುತ್ತಿತ್ತು. ಕ್ರಿ.ಶ.ಸು. 4ನೆಯ ಶತಮಾನದ ಹೊತ್ತಿಗೆ ಒಲಂಪಿಕ್‍ನಲ್ಲಿ ನಡೆಯುತ್ತಿದ್ದ ರಥಸ್ಪರ್ಧೆ ಕ್ರಮೇಣ ನಿಂತುಹೋದುದಾಗಿ ತಿಳಿದುಬರುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ರಥ&oldid=900354" ಇಂದ ಪಡೆಯಲ್ಪಟ್ಟಿದೆ