Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಆನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟಾಂಜಾನಿಯಾದ ಮಿಕುಮಿ ನ್ಯಾಷನಲ್ ಪಾರ್ಕ್ನಲ್ಲಿ ಹೆಣ್ಣು ಆಫ್ರಿಕನ್ ಬುಷ್ ಆನೆ.

ಪ್ರಾಚೀನತೆ

[ಬದಲಾಯಿಸಿ]

ಪ್ರಾಣಿಶಾಸ್ತ್ರದ ಪ್ರಕಾರ ಆನೆ ಸಸ್ತನಿಗಳ ವರ್ಗದಲ್ಲಿ ಪ್ರೊಬೊಸಿಡಿಯ ಉಪವರ್ಗದ ಒಂದು ಕುಟುಂಬ. ಹಿಂದೆ ಇವುಗಳನ್ನು ಪಾಚಿಡರ್ಮಾಟಾ ಎಂಬ ದಪ್ಪಚರ್ಮದ ಪ್ರಾಣಿಗಳ ಉಪವರ್ಗದಲ್ಲಿರಿಸಲಾಗಿತ್ತು. ಇಂದು ಮೂರು ತಳಿಗಳ ಆನೆಗಳು ಭೂಮಿಯ ಮೇಲೆ ಇವೆ. ಅವೆಂದರೆ: ಆಫ್ರಿಕದ ಪೊದೆಗಳ ಆನೆ, ಆಫ್ರಿಕದ ಅರಣ್ಯದ ಆನೆ ಮತ್ತು ಏಷ್ಯಾದ ಆನೆ. ಇವುಗಳಲ್ಲಿ ಮೊದಲೆರಡನ್ನು ಒಟ್ಟಾಗಿ ಆಫ್ರಿಕನ್ ಆನೆ ಎಂದು ಸಹ ಕರೆಯುವುದು ವಾಡಿಕೆ. ಏಷ್ಯಾದ ಆನೆಯನ್ನು ಭಾರತದ ಆನೆ ಎಂದು ಸಹ ಕರೆಯಲಾಗುತ್ತದೆ. ಸುಮಾರು ೧೦,೦೦೦ ವರ್ಷಗಳ ಹಿಂದೆ ಕೊನೆಗೊಂಡ ಹಿಮಯುಗದೊಂದಿಗೆ ಉಳಿದ ತಳಿಗಳ ಆನೆಗಳು ಭೂಮಿಯಿಂದ ಶಾಶ್ವತವಾಗಿ ಮರೆಯಾದುವು. ಇವುಗಳಲ್ಲಿ ಮ್ಯಾಮತ್ (ದೈತ್ಯ ಆನೆ) ಬಲು ಪ್ರಸಿದ್ಧ. ಆನೆ ಜಗತ್ತಿನಲ್ಲಿ ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಅತಿ ದೊಡ್ಡದು. ಅಲ್ಲದೆ ನೆಲದ ಮೇಲಿನ ಪ್ರಾಣಿಗಳಲ್ಲಿ ಆನೆಯ ಗರ್ಭಾವಸ್ಥೆಯ ಕಾಲ (೨೨ ತಿಂಗಳುಗಳು) ಎಲ್ಲಕ್ಕಿಂತ ದೀರ್ಘ. ಹುಟ್ಟಿದಾಗ ಆನೆಯ ಮರಿಯು ೧೨೦ ಕಿ.ಗ್ರಾಂ.ವರೆಗೆ ತೂಗುವುದಿದೆ. ಸುಮಾರು ೭೦ ವರ್ಷಗಳ ಕಾಲ ಆನೆಯು ಜೀವಿಸಬಲ್ಲುದು. ೧೯೫೬ರಲ್ಲಿ ಅಂಗೋಲದಲ್ಲಿ ಕೊಲ್ಲಲಾದ ಆನೆಯೊಂದರ ತೂಕವು ೧೨೦೦೦ ಕಿ.ಗ್ರಾಂ.ಗಳಷ್ಟಿದ್ದಿತು. ಈ ಬೃಹತ್ ಆನೆಯು ಭುಜದವರೆಗೆ ೧೩.೮ ಅಡಿ ಎತ್ತರವಾಗಿತ್ತು. ಇದು ಆಫ್ರಿಕಾದ ಆನೆಗಳ ಸರಾಸರಿ ಎತ್ತರಕ್ಕಿಂತ ಒಂದು ಮೀ. ಹೆಚ್ಚಾಗಿದ್ದಿತು. ಇದುವರೆಗೆ ದೊರೆತಿರುವ ಪಳೆಯುಳಿಕೆಗಳ ಅಧ್ಯಯನದ ಪ್ರಕಾರ ಅತಿ ಚಿಕ್ಕ ಗಾತ್ರದ ಆನೆಯು ಕೇವಲ ಒಂದು ಕರು ಅಥವ ದೊಡ್ಡ ಹಂದಿಯ ಗಾತ್ರದಲ್ಲಿದ್ದು ಇತಿಹಾಸಪೂರ್ವಕಾಲದಲ್ಲಿ ಕ್ರೀಟ್ ದ್ವೀಪದಲ್ಲಿ ನೆಲೆಸಿದ್ದುವು. ಆನೆಯು ಇಂದು ಅಳಿವಿನತ್ತ ಸಾಗಿರುವ ಜೀವಿ. ತನ್ನ ನೆಲೆಯ ಮೇಲೆ ಮಾನವನ ಅತಿಕ್ರಮಣ ಮತ್ತು ದಂತಕ್ಕಾಗಿ ನಿರಂತರವಾಗಿ ಸಾಗಿರುವ ಹತ್ಯೆಗಳೆ ಇದಕ್ಕೆ ಕಾರಣ. ಒಂದೊಮ್ಮೆ ಹಲವು ದಶಲಕ್ಷಗಳಷ್ಟಿದ್ದ ಆಫ್ರಿಕನ್ ಆನೆಗಳ ಸಂಖ್ಯೆ ಇಂದು ೪೭೦,೦೦೦ದಿಂದ ೬೯೦,೦೦೦ ಕ್ಕೆ ಇಳಿದಿದೆ. ವಿಶ್ವದೆಲ್ಲೆಡೆ ಇಂದು ಆನೆಯನ್ನು ಸಂರಕ್ಷಿತ ಜೀವಿಯನ್ನಾಗಿ ಕಾಪಾಡಿಕೊಳ್ಳಲಾಗುತ್ತಿದೆ. ಆನೆಗಳನ್ನು ಹಿಡಿಯುವುದು, ಪಳಗಿಸುವುದು, ದಂತವ್ಯಾಪಾರ ಇತ್ಯಾದಿಗಳ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಸಾಮಾನ್ಯವಾಗಿ ಆನೆಗಳು ಇತರ ಪ್ರಾಣಿಗಳಿಂದ ಬೇಟೆಯಾಡಲ್ಪಡುವುದಿಲ್ಲ. ಆದರೆ ಕೆಲವು ಪ್ರದೇಶಗಳಲ್ಲಿ ಸಿಂಹಗಳು ಮರಿ ಆನೆಗಳನ್ನು ಬೇಟೆಯಾಡುವ ಸಂದರ್ಭಗಳೂ ಇವೆ.ಆನೆ ಈಗ ಭಾರತದ ಪಾರಂಪರಿಕ ಪ್ರಾಣಿ.(ಹೆರಿಟೇಜ್ ಅನಿಮಲ್).ಆನೆ ಕಾರ್ಯಾಚರಣೆ ಪಡೆ ನೀಡಿದ "ಗಜ"ವರದಿಯ ಆಧಾರದಲ್ಲಿ ೨೦೧೦ ಅಕ್ಟೋಬರ್ ನಲ್ಲಿ ಕೇಂದ್ರ ಸರಕಾರ ಈ ಘೋಷಣೆ ಮಾಡಿದೆ.೧೯೯೨ರಲ್ಲಿ ಶುರುವಾದ "ಪ್ರಾಜೆಕ್ಟ್ ಎಲಿಫೆಂಟ್ " ಯೋಜನೆಗೆ ಚುರುಕು ನೀಡಲು ೨೦೧೦ ಮಾರ್ಚ್ ನಲ್ಲಿ ಪರಿಸರ ಸಚಿವಾಲಯ "ಎಲಿಫೆನ್ಟ್ ಟಾಸ್ಕ್ ಪೋರ್ಸ್"ರಚನೆ ಮಾಡಿತ್ತು.ಭಾರತದಲ್ಲಿ ೨೮,೦೦೦ ದಷ್ಟು ಆನೆಗಳಿವೆ

ಪ್ರಾಣಿಶಾಸ್ತ್ರದ ಪ್ರಕಾರ ವಿಂಗಡನೆ

[ಬದಲಾಯಿಸಿ]

ತಳಿಗಳು

[ಬದಲಾಯಿಸಿ]
ಮಾನವನ ಗಾತ್ರ ಮತ್ತು ಆನೆಯ ಗಾತ್ರಗಳ ಒಂದು ಕಾಲ್ಪನಿಕ ಚಿತ್ರ

ಆಫ್ರಿಕನ್ ಆನೆಯ ವರ್ಗದಲ್ಲಿ ಎರಡು ತಳಿಗಳು ಇಂದು ಜೀವಿಸಿವೆ. ಏಷ್ಯಾದ ಆನೆಯ ಒಂದು ತಳಿ ಮಾತ್ರ ಇಂದು ನಮ್ಮೊಡನಿದೆ. ಆದರೆ ಏಷ್ಯಾದ ಆನೆಯನ್ನು ಮತ್ತೆ ಮೂರು ಉಪತಳಿಗಳಾಗಿ ವಿಂಗಡಿಸಬಹುದು. ಆಫ್ರಿಕನ್ ಆನೆಯು ಸರಾಸರಿ ೪ ಮೀಟರ್‍ನಷ್ಟು ( ೧೩ ಅಡಿ ೧ ಅಂಗುಲ) ಎತ್ತರವಾಗಿದ್ದು ಸುಮಾರು ೭೫೦೦ ಕಿಲೋಗ್ರಾಂ ತೂಗುವುದು. ಅಲ್ಲದೆ ಆಫ್ರಿಕನ್ ಆನೆಯು ಏಷ್ಯಾದ ಆನೆಗಿಂತ ದೊಡ್ಡ ಗಾತ್ರದ್ದಾಗಿರುತ್ತದೆ ಮತ್ತು ಇದರ ಕಿವಿಗಳು ಸಹ ದೊಡ್ಡವು. ಆಫ್ರಿಕಾದ ಆನೆಗಳಲ್ಲಿ ಗಂಡಾನೆ ಮತ್ತು ಹೆಣ್ಣಾನೆಗಳೆರಡೂ ದೊಡ್ಡ ಗಾತ್ರದ ದಂತಗಳನ್ನು ಹೊಂದಿರುತ್ತವೆ. ಆದರೆ ಏಷ್ಯಾದ ಗಂಡಾನೆಯ ದಂತದ ಗಾತ್ರ ಹೋಲಿಕೆಯಲ್ಲಿ ಚಿಕ್ಕದು ಮತ್ತು ಹೆಣ್ಣಾನೆಯ ದಂತವು ಇಲ್ಲವೇ ಇಲ್ಲವೆನಿಸುವಷ್ಟು ಸಣ್ಣದು. ಆಫ್ರಿಕನ್ ಆನೆಯ ಬೆನ್ನು ಹಿಮ್ಮುಖವಾಗಿ ಇಳಿಜಾರಾಗಿದ್ದು ಹಣೆಯು ಮಟ್ಟಸವಾಗಿರುವುದಲ್ಲದೆ ಸೊಂಡಿಲಿನ ತುದಿಯಲ್ಲಿ ಎರಡು ಬೆರಳುಗಳ ರಚನೆ ಕಾಣುವುದು. ಏಷ್ಯಾದ ಆನೆಯ ಬೆನ್ನು ಬಾಗಿರುವುದು. ಹಣೆಯ ಮೇಲೆ ಎರಡು ಸಣ್ಣ ಡುಬ್ಬಗಳು ಇರುವುವು. ಸೊಂಡಿಲಿನ ತುದಿಯಲ್ಲಿ ಒಂದು ಬೆರಳು ಮಾತ್ರ ಇರುತ್ತದೆ. ಆಫ್ರಿಕನ್ ಆನೆಗಳನ್ನು ಮತ್ತೂ ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಅವೆಂದರೆ ಸವಾನ್ನಾ ಆನೆಗಳು ಮತ್ತು ಕಾಡಿನ ಆನೆಗಳು.

ಆಫ್ರಿಕದ ಆನೆ

[ಬದಲಾಯಿಸಿ]
ಕೆನ್ಯಾದಲ್ಲಿ ಆಫ್ರಿಕಾದ ಹೆಣ್ಣಾನೆಯೊಂದು ತನ್ನ ಮರಿಯೊಡನೆ.
ಟಾಂಜಾನಿಯಾದ ಮಿಕುಮಿ ರಾಷ್ಟ್ರೀಯ ಉದ್ಯಾನದಲ್ಲಿ ಆಫ್ರಿಕಾದ ಸವಾನ್ನಾ ಆನೆ.

ಆಫ್ರಿಕನ್ ಆನೆಯು (ವೈಜ್ಞಾನಿಕ ಹೆಸರು:ಲೊಕ್ಸೊಡಾಂಟ ಆಫ್ರಿಕಾನಾ ) ಆಫ್ರಿಕಾ ಖಂಡದ ೩೭ ರಾಷ್ಟ್ರಗಳಲ್ಲಿ ಇಂದು ಕಂಡುಬರುತ್ತದೆ. ಇವುಗಳಲ್ಲಿ ಸವಾನ್ನಾದ ಆನೆಯು ವಿಶ್ವದ ಅತಿ ದೊಡ್ಡ ಗಾತ್ರದ ಆನೆ ಮತ್ತು ನೆಲದ ಮೇಲೆ ಜೀವಿಸುವ ಪ್ರಾಣಿಗಳಲ್ಲಿ ಅತ್ಯಂತ ದೊಡ್ಡದು. ಗಂಡಾನೆಯ ಸರಾಸರಿ ಎತ್ತರ ೧೦ ಅಡಿ. ಮತ್ತು ತೂಕ ಸುಮಾರು ೭೦೦೦ ಕಿಲೋಗ್ರಾಂ. ಕೆಲವೊಮ್ಮೆ ಗಂಡಾನೆಯು ೧೩ ಅಡಿಗಳಷ್ಟು ಎತ್ತರ ಇರುವುದೂ ಉಂಟು. ಹೆಣ್ಣಾನೆಗಳು ಗಂಡಿಗಿಂತ ತುಂಬಾ ಚಿಕ್ಕ ಗಾತ್ರದವು. ಸವಾನ್ನಾ ಆನೆಗಳು ಸಾಮಾನ್ಯವಾಗಿ ಬಯಲುಮಾಳ, ಜೌಗು ಪ್ರದೇಶ ಮತ್ತು ಸರೋವರಗಳ ತೀರದಲ್ಲಿ ಹಿಂಡಿನಲ್ಲಿ ಜೀವಿಸುತ್ತವೆ. ಸಹಾರಾ ಮರುಭೂಮಿಯ ದಕ್ಷಿಣಕ್ಕಿರುವ ಸವಾನ್ನಾ ಹುಲ್ಲುಗಾವಲು ಪ್ರದೇಶದಲ್ಲಿ ಇವು ವ್ಯಾಪಕವಾಗಿ ಕಾಣಬರುವುವು. ಕಾಡಿನ ಆನೆಗಳು ( ಲೊಕ್ಸೊಡೋಂಟಾ ಸೈಕ್ಲೋಟಿಸ್ ) ಆಫ್ರಿಕನ್ ಆನೆಯ ಇನ್ನೊಂದು ತಳಿ. ಸವಾನ್ನಾ ಅನೆಗಳಿಗಿಂತ ಇವುಗಳ ಕಿವಿಗಳು ಚಿಕ್ಕದಾಗಿರುತ್ತವೆ. ಅಲ್ಲದೆ ಇವುಗಳ ದಂತವು ತೆಳುವಾಗಿ ನೇರವಾಗಿ ಇರುವುದಲ್ಲದೆ ಹೊರಬಾಗುವಿಕೆಯು ಸಹ ಕಡಿಮೆ ಇರುತ್ತದೆ. ೧೦ ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಲ್ಲ ಈ ಕಾಡಿನೆ ಆನೆಯು ೪೫೦೦ ಕಿಲೋಗ್ರಾಂವರೆಗೆ ತೂಗುವುದು. ಹೊರಗಿನ ಪ್ರಪಂಚಕ್ಕೆ ಸುಲಭವಾಗಿ ಕಾಣಿಸಿಕೊಳ್ಳುವ ಸವಾನ್ನಾ ಅನೆಗಳ ಬಗ್ಗೆ ತಿಳಿದಿರುವಷ್ಟು ವಿಷಯಗಳು ಕಾಡಿನ ಆನೆಗಳ ಬಗ್ಗೆ ತಿಳಿದಿಲ್ಲ. ಪರಿಸರ ರಕ್ಷಣಾ ಕಾಯಿದೆಗಳು ಮತ್ತು ರಾಜಕೀಯ ಅಡೆತಡೆಗಳಿಂದಾಗಿ ಕಾಡಾನೆಗಳ ಅಧ್ಯಯನ ಬಹಳ ಪ್ರಗತಿ ಕಂಡಿಲ್ಲ. ಸಾಮಾನ್ಯವಾಗಿ ಕಾಡಿನ ಆನೆಗಳು ಪಶ್ಚಿಮ ಮತ್ತು ಮಧ್ಯ ಆಫ್ರಿಕಾದ ದಟ್ಟ ಮಳೆಕಾಡುಗಳಲ್ಲಿ ಜೀವಿಸುತ್ತವೆ. ಅಪರೂಪವಾಗಿ ಕಾಡಿನ ಅಂಚಿಗೆ ಬಂದು ಬಯಲಿನ ಸವಾನ್ನಾ ಆನೆಗಳೊಂದಿಗೆ ಸೇರಿ ಸಂತಾನೋತ್ಪತ್ತಿ ನಡೆಸುವುದೂ ಉಂಟು. ೧೯೭೯ರಲ್ಲಿ ಇಯನ್ ಡಗ್ಲಾಸ್ ಹ್ಯಾಮಿಲ್ಟನ್ ಎಂಬಾತನು ಇವುಗಳ ಒಟ್ಟು ಸಂಖ್ಯೆ ಸುಮಾರು ೧೩ ಲಕ್ಷದಷ್ಟು ಎಂದು ಅಂದಾಜು ಮಾಡಿದನು. ಈ ಅಂದಾಜು ವಿವಾದಾಸ್ಪದವಾಗಿದ್ದು ಉತ್ಪ್ರೇಕ್ಷಿತ ಸಂಖ್ಯೆಯೆನಿಸಿದರೂ ಸಾಮಾನ್ಯವಾಗಿ ಇದನ್ನೇ ಅಧಿಕೃತವೆಂದು ಸ್ವೀಕರಿಸಲಾಗಿದೆ. ೮೦ರ ದಶಕದಲ್ಲಿ ಪೂರ್ವ ಆಫ್ರಿಕಾದಲ್ಲಿ ಅತಿಯಾಗಿ ಹೆಚ್ಚಿದ ಆನೆಗಳ ಕಳ್ಳಬೇಟೆಯಿಂದಾಗಿ ಆನೆಯ ಸಂತತಿಗೆ ದೊಡ್ಡ ವಿಪತ್ತುಂಟಾಗಿ ವಿಶ್ವದ ಗಮನ ಸೆಳೆಯಿತು. ಇಂದು ಸುಮಾರು ೪೭೦೦೦೦ದಿಂದ ೬೯೦೦೦೦ರಷ್ಟು ಆನೆಗಳು ಆಫ್ರಿಕಾದಲ್ಲಿ ಇವೆಯೆಂದು ೨೦೦೭ರ ವರದಿಯೊಂದು ತಿಳಿಸುತ್ತದೆ. ಈ ಗಣತಿಯಲ್ಲಿ ಸಾಮಾನ್ಯವಾಗಿ ಆನೆಗಳು ವಾಸಿಸುವ ಪ್ರದೇಶದ ಅರ್ಧಭಾಗವನ್ನು ಮಾತ್ರ ಪರಿಗಣಿಸಲಾಗಿತ್ತು. ಆದರೆ ತಜ್ಞರ ಪ್ರಕಾರ ಆನೆಗಳ ನಿಜವಾದ ಸಂಖ್ಯೆ ಇದಕ್ಕಿಂತ ಬಲು ಹೆಚ್ಚಾಗಿರಲು ಸಾಧ್ಯವಿಲ್ಲ. ಆಫ್ರಿಕಾ ಖಂಡದಲ್ಲಿ ಇಂದು ಅತಿ ಹೆಚ್ಚಿನ ಸಂಖ್ಯೆಯ ಆನೆಹಿಂಡುಗಳು ದಕ್ಷಿಣ ಮತ್ತು ಪೂರ್ವ ಆಫ್ರಿಕಾಗಳಲ್ಲಿ ಕಂಡುಬರುವುವು. ಇಡೀ ಖಂಡದ ಒಟ್ಟು ಆನೆಗಳ ಸಂಖ್ಯೆಯ ದೊಡ್ಡ ಭಾಗ ಇಲ್ಲಿಯೇ ಇರುವುದು. ಅಲ್ಲದೆ ಸಮಾಧಾನಕರ ವಿಷಯವೆಂದರೆ ದಕ್ಷಿಣ ಮತ್ತು ಪೂರ್ವ ಆಫ್ರಿಕಾಗಳಲ್ಲಿ ಆನೆಗಳ ಸಂಖ್ಯೆ ಕಳೆದ ೧೨ ವರ್ಷಗಳಿಂದ ಸ್ಥಿರವಾಗಿದೆ ಅಥವಾ ವಾರ್ಷಿಕ ೪.೫% ರಷ್ಟು ಹೆಚ್ಚುತ್ತಿದೆ. ಪಶ್ಚಿಮ ಆಫ್ರಿಕಾದಲ್ಲಿರುವ ಆನೆಗಳ ಸಂಖ್ಯೆ ಕಡಿಮೆ ಮತ್ತು ಚದುರಿಹೋಗಿದೆ. ಮಧ್ಯ ಆಫ್ರಿಕಾದ ಗೊಂಡಾರಣ್ಯಗಳಲ್ಲಿರುವ ಆನೆಗಳ ಗಣತಿ ಸಾಧ್ಯವಾಗಿಲ್ಲ. ಆದರೆ ಈಲ್ಲಿ ದಂತಕ್ಕಾಗಿ ಮತ್ತು ಮಾಂಸಕ್ಕಾಗಿ ಆನೆಗಳ ಹತ್ಯೆ ಅವ್ಯಾಹತವಾಗಿ ಸಾಗಿದೆಯೆಂಬ ಸುದ್ದಿಗಳಿವೆ.

ಆಫ್ರಿಕಾ ಆನೆಗಳ ಸಂಖ್ಯೆ ಇಳಿಮುಖ

[ಬದಲಾಯಿಸಿ]
  • 29 Sep, 2016:
  • ಕಳೆದ 25 ವರ್ಷಗಳಲ್ಲಿ ಆಫ್ರಿಕಾ ಖಂಡದಲ್ಲಿ ಅವನತಿ ಹೊಂದಿದ ಆನೆಗಳ ಸಂಖ್ಯೆ 1.1 ಲಕ್ಷ; ಕಳೆದ 25 ವರ್ಷಗಳಲ್ಲಿ ಆಫ್ರಿಕಾದಲ್ಲಿ ಆನೆ ಸಂತತಿ ಗಣನೀಯವಾಗಿ ಕ್ಷೀಣಿಸಿರುವುದು ಬೆಳಕಿಗೆ ಬಂದಿದೆ. ಅಂತರರಾಷ್ಟ್ರೀಯ ಪ್ರಕೃತಿ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣಾ ಒಕ್ಕೂಟ (ಐಯುಸಿಎನ್‌) ಆಫ್ರಿಕಾದಲ್ಲಿನ ಆನೆ ಸಂತತಿಗೆ ಸಂಬಂಧಿಸಿ ಸಮೀಕ್ಷೆ ನಡೆಸಿ ವರದಿಯೊಂದನ್ನು ಸಿದ್ಧಪಡಿಸಿದೆ.
  • ಅಕ್ರಮ ಬೇಟೆ ಕಾರಣ:ದಂತಕ್ಕಾಗಿ ಆನೆಗಳನ್ನು ಅಕ್ರಮವಾಗಿ ಬೇಟೆಯಾಡಲಾಗುತ್ತಿದೆ. 1970, 1980ರ ದಶಕದಿಂದ ಅಕ್ರಮ ಬೇಟೆ ಹೆಚ್ಚಾಗಿದೆ. ಇದು ಆನೆಗಳ ಸಂತತಿ ಕ್ಷೀಣಿಸಲು ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
  • ಪ್ರಸ್ತುತ ಆಫ್ರಿಕಾದಲ್ಲಿರುವ ಆನೆಗಳ ಸಂಖ್ಯೆ ೪.೧೫ ಲಕ್ಷ ಎಂದು ಅಂದಾಜಿಲಾಗಿದೆ.[]

ಏಷ್ಯಾದ ಆನೆ

[ಬದಲಾಯಿಸಿ]
ಆನೆಗಳ ಒಂದು ವರ್ಣಚಿತ್ರ

ಏಷ್ಯಾದ ಆನೆ ಅಥವಾ ಭಾರತದ ಆನೆ ( ವೈಜ್ಞಾನಿಕ ಹೆಸರು : ಎಲಿಫಾಸ್ ಮ್ಯಾಕ್ಸಿಮಸ್ ) ಆಫ್ರಿಕನ್ ಆನೆಗಿಂತ ಗಾತ್ರದಲ್ಲಿ ಸಣ್ಣದು. ಅಲ್ಲದೆ ಗಂಡಾನೆಗಳು ಮಾತ್ರ ದೊಡ್ಡದಾದ ದಂತಗಳನ್ನು ಹೊಂದಿರುತ್ತವೆ. ಇಂದು ಭೂಮಿಯ ಮೇಲೆ ಸುಮಾರು ೬೦,೦೦೦ ಮಾತ್ರ ಏಷ್ಯಾದ ಆನೆಗಳು ಇವೆ. ಇವುಗಳ ಪೈಕಿ ೩೮,೦೦೦ದಿಂದ ೫೩,೦೦೦ದಷ್ಟು ಆನೆಗಳು ಕಾಡಿನಲ್ಲೂ ಮತ್ತು ಸುಮಾರು ೧೫,೦೦೦ ದಷ್ಟು ಆನೆಗಳು ಪಳಗಿಸಲ್ಪಟ್ಟು ನಾಡಿನಲ್ಲೂ ಇವೆಯೆಂದು ಒಂದು ಅಂದಾಜು. ಏಷ್ಯಾದ ಆನೆಯ ಸಂತತಿ ಕ್ರಮೇಣ ಕ್ಷೀಣಿಸುತ್ತಾ ಬಂದಿದೆ. ಕಾಡುಗಳ ಅತಿಕ್ರಮಣ ಮತ್ತು ದಂತಕ್ಕಾಗಿ ಆನೆಗಳ ಹತ್ಯೆ ಇದಕ್ಕೆ ಮುಖ್ಯ ಕಾರಣಗಳು. ಏಷ್ಯಾದ ಆನೆಗಳಲ್ಲಿ ಹಲವು ಉಪತಳಿಗಳಿವೆ. ಇವುಗಳಲ್ಲಿ ಮೊದಲನೆಯದು ಶ್ರೀಲಂಕಾದ ಆನೆ ( ಎಲಿಫಾಸ್ ಮ್ಯಾಕ್ಸಿಮಸ್ ಮ್ಯಾಕ್ಸಿಮಸ್). ಈ ಪಂಗಡವು ಶ್ರೀಲಂಕಾ ದ್ವೀಪದಲ್ಲಿ ಮಾತ್ರ ಕಂಡುಬರುವುದು. ಏಷ್ಯಾದ ಆನೆಗಳಲ್ಲಿ ಈ ಉಪತಳಿ ಅತಿ ದೊಡ್ಡ ಗಾತ್ರವುಳ್ಳದ್ದಾಗಿದೆ. ಈ ಗುಂಪಿನ ಆನೆಗಳ ಒಟ್ಟು ಸಂಖ್ಯೆ ಸುಮಾರು ೩೦೦೦ದಿಂದ ೪೫೦೦ದ ವರೆಗೆಂದು ಅಂದಾಜು ಮಾಡಲಾಗಿದೆ. ಸಲಗಗಳು ೧೧ ಅಡಿಗಳವರೆಗೆ ಬೆಳೆದು ೫೪೦೦ ಕಿಲೋಗ್ರಾಂವರೆಗೆ ತೂಗಬಲ್ಲವು. ಶ್ರೀಲಂಕಾದ ಆನೆಗಳಲ್ಲಿ (ಹೆಣ್ಣಾನೆ ಮತ್ತು ಗಂಡಾನೆಗಳೆರಡಲ್ಲೂ) ಮೈಬಣ್ಣವು ಶರೀರದ ಹಲವು ಕಡೆ ಬಿಳಿಚಿಕೊಂಡು ಗುಲಾಬಿ ಬಣ್ಣಕ್ಕೆ ತಿರುಗಿರುವುದು ಕಂಡುಬರುವುದು. ಶ್ರೀಲಂಕಾದ ಪಿನ್ನವಲ ಎಂಬಲ್ಲಿ ಆನೆಗಳಿಗಾಗಿಯೇ ಒಂದು ಅನಾಥಾಲಯವಿದೆ. ಇಲ್ಲಿ ಅಂಗವಿಕಲ ಮತ್ತು ಗಾಯಗೊಂಡ ಆನೆಗಳಿಗೆ ಆಶ್ರಯ ನೀಡಲಾಗುತ್ತದೆ. ಇಂತಹ ವ್ಯವಸ್ಥೆಯು ಆನೆಯ ಸಂತತತಿಯು ನಿರ್ನಾಮವಾಗುವುದನ್ನು ತಡೆಯುವಲ್ಲಿ ಸಹಕಾರಿಯಾಗಿದೆ. ಏಷ್ಯಾದ ಆನೆಗಳಲ್ಲಿ ಇನ್ನೊಂದು ಉಪವರ್ಗ ಭಾರತದ ಆನೆಯದು ( ಎಲಿಫಾಸ್ ಮ್ಯಾಕ್ಸಿಮಸ್ ಇಂಡಿಕಸ್ ). ಸುಮಾರು ೩೬,೦೦೦ದಷ್ಟಿರುವ ಈ ಭಾರತದ ಆನೆಗಳೇ ಏಷ್ಯಾದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿವೆ. ಹೆಚ್ಚೂಕಡಿಮೆ ಶ್ರೀಲಂಕದ ಆನೆಗಳ ಗಾತ್ರವೇ ಇರುವ ಇವುಗಳ ಸೊಂಡಿಲಿನಲ್ಲಿ ಮಾತ್ರ ಗುಲಾಬಿ ಬಣ್ಣದ ಪಟ್ಟೆಗಳು ಕಾಣುವುವು. ಭಾರತದಿಂದ ಇಂಡೋನೇಷ್ಯಾವರೆಗೆ ೧೧ ದೇಶಗಳಲ್ಲಿ ಈ ಆನೆಗಳು ಜೀವಿಸಿವೆ. ಹೆಚ್ಚಿನ ಆಹಾರ ಲಭ್ಯವಿರುವ ಕಾರಣಕ್ಕಾಗಿ ಸಾಮಾನ್ಯವಾಗಿ ಇವು ಅರಣ್ಯಪ್ರದೇಶ ಅಥವಾ ಕಾಡಿನ ಅಂಚಿನ ಪ್ರದೇಶವನ್ನು ಇಷ್ಟಪಡುತ್ತವೆ. ಅತ್ಯಂತ ಚಿಕ್ಕ ಕಾಯದ ಏಷ್ಯಾದ ಆನೆಯೆಂದರೆ ಸುಮಾತ್ರಾ ಆನೆ ( ಎಲಿಫಾಸ್ ಮ್ಯಾಕ್ಸಿಮಸ್ ಸುಮಾತ್ರಾನಸ್ ). ಇಂದು ಈ ಪ್ರಭೇದದ ಸುಮಾರು ೨ ರಿಂದ ೩ ಸಾವಿರ ಆನೆಗಳು ಮಾತ್ರ ಜೀವಿಸಿವೆ. ಇದರ ಮೈಬಣ್ಣ ತೆಳು ಬೂದು ಬಣ್ಣ. ಪ್ರೌಢ ಆನೆಯು ಅತಿ ಹೆಚ್ಚೆಂದರೆ ೮.೫ ಅಡಿಗಳಷ್ಟು ಮಾತ್ರ ಎತ್ತರವಾಗಿದ್ದು ೩೦೦೦ ಕಿಲೋಗ್ರಾಂಗಿಂತ ಕಡಿಮೆ ತೂಗುತ್ತದೆ. ಈ ಆನೆಗಳು ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಅರಣ್ಯಗಳಲ್ಲಿ ಮಾತ್ರ ಕಂಡುಬರುತ್ತವೆ. ೨೦೦೩ರಲ್ಲಿ ಇನ್ನೊಂದು ಉಪಜಾತಿಯ ಆನೆಯನ್ನು ಮೊದಲ ಬಾರಿಗೆ ಗುರುತಿಸಲಾಯಿತು. ಬೋರ್ನಿಯೋ ಪಿಗ್ಮಿ ಆನೆ ಎಂಬ ಹೆಸರುಳ್ಳ ಇದು ಉಳಿದೆಲ್ಲ ಜಾತಿಯ ಆನೆಗಳಿಗಿಂತ ಚಿಕ್ಕದು ಮತ್ತು ಸ್ವಭಾವದಲ್ಲಿ ಸಾಧು.

ದೇಹ ರಚನೆ

[ಬದಲಾಯಿಸಿ]

ಸೊಂಡಿಲು

[ಬದಲಾಯಿಸಿ]

ಆನೆಗಳಲ್ಲಿ ಮೇಲ್ದುಟಿ ಮತ್ತು ಮೂಗು ಒಂದಾಗಿ ಉದ್ದವಾಗಿ ಕೋಳವೆಯಾಕಾರದಲ್ಲಿ ಬೆಳೆಯುತ್ತವೆ. ಇದೇ ಸೊಂಡಿಲು. ಈ ವಿಶಿಷ್ಟ ಅವಯವ ಆನೆಯ ಅತಿ ಮುಖ್ಯವಾದ ಅಂಗವೆನ್ನಬಹುದು. ಆನೆಯ ಸೊಂಡಿಲು ಒಂದು ಬಹೂಪಯೋಗಿ ಅಂಗ. ಆಫ್ರಿಕಾದ ಆನೆಗಳಲ್ಲಿ ಸೊಂಡಿಲಿನ ತುದಿಯಲ್ಲಿ ಎರಡೂ ಬೆರಳುಗಳಂತಹ ರಚನೆ ಇದ್ದರೆ ಏಷ್ಯಾದ ಆನೆಗಳಲ್ಲಿ ಒಂದು ಮಾತ್ರ ಇರುವುದು. ಪ್ರಾಣಿಶಾಸ್ತ್ರ ವಿಜ್ಞಾನಿಗಳ ಪ್ರಕಾರ ಆನೆಯ ಸೊಂಡಿಲಿನಲ್ಲಿ ನಲುವತ್ತು ಸಹಸ್ರಕ್ಕೂ ಹೆಚ್ಚಿನ ಸಂಖ್ಯೆಯ ಸ್ನಾಯುಗಳಿವೆ. ಇಂತಹ ರಚನೆಯಿಂದಾಗಿ ಆನೆಯು ಹುಲ್ಲಿನ ಒಂದೇ ಒಂದು ಎಸಳನ್ನು ಸಹ ಎತ್ತಿಕೊಳ್ಳಬಲ್ಲುದು. ಅದೇ ಸಮಯಕ್ಕೆ ಆನೆಯ ಸೊಂಡಿಲು ಮರಗಳ ದೊಡ್ಡದೊಡ್ಡ ರೆಂಬೆಗಳನ್ನು ಮುರಿಯುವಷ್ಟು ಬಲಿಷ್ಠವಾಗಿಯೂ ಇರುತ್ತದೆ. ಕೆಲವರ ಪ್ರಕಾರ ಆನೆಯ ಸೊಂಡಿಲಿನಲ್ಲಿರುವ ಸ್ನಾಯುಗಳ ಸಂಖ್ಯೆ ಒಂದು ಲಕ್ಷದಷ್ಟು. ಆನೆಯು ತನ್ನ ಸೊಂಡಿಲನ್ನು ಕುಡಿಯುವ ಸಾಧನವಾಗಿಯೂ ಬಳಸುವುದು. ಆನೆಗಳು ತಮ್ಮ ಸೊಂಡಿಲಿನಲ್ಲಿ ತುಂಬುವಷ್ಟು (ಸುಮಾರು ೧೪ ಲೀಟರ್) ನೀರನ್ನು ಹೀರಿಕೊಡು ನಂತರ ತಮ್ಮ ಬಾಯಿಯೊಳಗೆ ಉಗಿದುಕೊಳ್ಳುತ್ತವೆ. ಅಲ್ಲದೆ ಜಳಕದ ಸಮಯದಲ್ಲಿ ಆನೆಗಳು ನೀರನ್ನು ಸೊಂಡಿಲಿನ ಮೂಲಕ ತಮ್ಮ ಮೈಮೇಲೆ ಸಿಂಪಡಿಸಿಕೊಳ್ಳುತ್ತವೆ. ಹೀಗೆ ಮೈಯನ್ನು ತೇವವಾಗಿಸಿಕೊಂಡ ನಂತರ ಆನೆಗಳು ತಮ್ಮ ಮೈಮೇಲೆ ಧೂಳು ಮತ್ತು ಕೆಸರನ್ನು ಎರಚಿಕೊಳ್ಳುತ್ತವೆ. ಇದು ಆನೆಗಳ ಶರೀರಕ್ಕೆ ಪ್ರಖರ ಸೂರ್ಯಕಿರಣಗಳಿಂದ ತಕ್ಕಮಟ್ಟಿನ ರಕ್ಷಣೆ ಒದಗಿಸುತ್ತದೆ. ಇದಲ್ಲದೆ ಈಜುವಾಗ ಸಹ ಸೊಂಡಿಲು ಆನೆಗೆ ಉಸಿರಾಡುವ ಕೊಳವೆಯಂತೆ ಉಪಯೋಗಕ್ಕೆ ಬರುವುದು. ಆನೆಗೆ ಸೊಂಡಿಲು ಪರಸ್ಪರ ಸಂಪರ್ಕದಲ್ಲಿ ಸಹ ಪ್ರಯೋಜನಕಾರಿಯಾಗಿದೆ. ಮಿತ್ರತ್ವ ಹೊಂದಿರುವ ಆನೆಗಳು ಸೊಂಡಿಲುಗಳನ್ನು ಒಂದಕ್ಕೊಂದು ಹೆಣೆದು ತಮ್ಮ ವಿಶ್ವಾಸ ಮತ್ತು ಗೆಳೆತನ ಪ್ರದರ್ಶಿಸುತ್ತವೆ. ವಿನೋದಕ್ಕಾಗಿ ಮಲ್ಲಯುದ್ಧ ಆಡುವಾಗ ಸೊಂಡಿಲು ಪ್ರಮುಖ ಸಾಧನವಾಗಿದೆ. ಪ್ರೇಮಾಲಾಪದಲ್ಲಿ ಹಾಗೂ ತಾಯಿ ಮಗುವಿನ ನಡುವೆ ಮಮತೆ ಪ್ರದರ್ಶಿಸುವಾಗ ಕೂಡ ಸೊಂಡಿಲಿನ ಬಳಕೆ ಪ್ರಮುಖವಾದುದು. ಮೇಲಕ್ಕೆತ್ತಿ ಹಿಡಿದಿರುವ ಸೊಂಡಿಲು ಎಚ್ಚರಿಕೆಯ ಸಂಕೇತವಾಗಿದ್ದರೆ ಕೆಳಬಾಗಿಸಲ್ಪಟ್ಟಿರುವ ಸೊಂಡಿಲು ಪರಾಜಯ ಅಥವಾ ಅರ್ಪಣೆಯನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಆನೆಗಳು ತಮ್ಮ ಮೇಲೆರಗುವ ಪ್ರಾಣಿಗಳನ್ನು ಸೊಂಡಿಲಿನಿಂದ ಅಪ್ಪಳಿಸಿ ಇಲ್ಲವೇ ಎತ್ತಿ ದೂರಕ್ಕೆ ಒಗೆದು ತಮ್ಮ ರಕ್ಷಣೆ ಮಾಡಿಕೊಳ್ಳುತ್ತವೆ. ಆನೆಗೆ ಸೊಂಡಿಲು ವಾಸನೆ ಗ್ರಹಿಸುವ ಅಂಗ. ಆನೆಯ ಘ್ರಾಣಶಕ್ತಿ ಬಲು ಸೂಕ್ಷ್ಮವಾಗಿರುವುದು. ಸೊಂಡಿಲನ್ನು ಎತ್ತಿ ಹಿಡಿದು ಎಲ್ಲಾ ದಿಸೆಗಳಲ್ಲಿ ಆಡಿಸುತ್ತ ಆನೆಯು ತನ್ನ ಮಿತ್ರರ, ಶತ್ರುಗಳ ಹಾಗೂ ಅಹಾರದ ಇರುವಿಕೆಯನ್ನು ಅರಿಯಬಲ್ಲುದು.

ದಂತಗಳು

[ಬದಲಾಯಿಸಿ]

ಆನೆಯ ಬಾಯಿಯ ಮೇಲ್ದವಡೆಯ ಎರಡು ಕೋರೆಹಲ್ಲುಗಳು ಬಾಯಿಯಿಂದ ಹೊರಚಾಚಿ ದೀರ್ಘವಾಗಿ ಬೆಳೆದು ದಂತ(ಆನೆಕೊಂಬು) ಎಂಬ ಹೆಸರು ಪಡೆದಿವೆ. ಆನೆಗಳ ದಂತಗಳು ಜೀವನಪರ್ಯಂತ ಬೆಳೆಯುತ್ತಲೇ ಇರುತ್ತವೆ. ವಯಸ್ಕ ಗಂಡಾನೆಯ ದಂತ ವರ್ಷಕ್ಕೆ ೭ ಅಂಗುಲದಷ್ಟು ಬೆಳೆಯಬಲ್ಲುದು. ನೀರು,ಉಪ್ಪು ಮತ್ತು ಬೇರುಗಳನ್ನು ಪಡೆಯಲು ನೆಲವನ್ನು ಅಗೆಯುವಲ್ಲಿ ದಂತಗಳು ಆನೆಗೆ ಸಹಕಾರಿಯಾಗಿವೆ. ಅಲ್ಲದೆ ಮರದ ತೊಗಟೆಯನ್ನು ಸುಲಿಯಲು, ತಿರುಳಿರುವ ಮೆದುಮರಗಳನ್ನು ಬಗೆಯಲು ಸಹ ದಂತಗಳು ಬಳಸಲ್ಪಡುತ್ತವೆ. ದಾರಿಗಡ್ಡವಾಗಿರುವ ಮರಗಳನ್ನು, ಕೊಂಬೆಗಳನ್ನು ನಿವಾರಿಸಲು ದಂತಗಳು ಬಳಕೆಯಾಗುತ್ತವೆ. ತನ್ನ ಚಲನ ಕ್ಷೇತ್ರವನ್ನು ಮರಗಳ ಮೇಲೆ ಗುರುತಿಸಲು ಆನೆಯು ದಂತದ ಉಪಯೋಗ ಪಡೆಯುತ್ತದೆ. ಒಮ್ಮೊಮ್ಮೆ ಹೋರಾಟದ ಅಸ್ತ್ರವಾಗಿ ಸಹ ದಂತದ ಬಳಕೆಯಾಗುವುದು. ಮಾನವರಲ್ಲಿ ಬಲಗೈ ಪ್ರಧಾನ ಮತ್ತು ಎಡಗೈ ಪ್ರಧಾನವಾಗಿರುವವರು ಇರುವಂತೆ ಆನೆಗಳು ಸಹ ಎಡದಂತ ಪ್ರಧಾನ ಅಥವಾ ಬಲದಂತ ಪ್ರಧಾನವಾಗಿರುತ್ತವೆ. ಎರಡರಲ್ಲಿ ಪ್ರಧಾನವಾಗಿರುವ ದಂತವು ಸ್ವಲ್ಪ ಗಿಡ್ಡವಾಗಿದ್ದು ತುದಿಯು ಮೊಂಡಾಗಿರುತ್ತದೆ. ಆಫ್ರಿಕಾದ ಗಂಡಾನೆ ಮತ್ತು ಹೆಣ್ಣಾನೆಗಳೆರಡೂ ಭಾರಿ ಗಾತ್ರದ ದಂತವನ್ನು ಹೊಂದಿರುತ್ತವೆ. ಇವುಗಳ ದಂತಗಳು ೧೦ ಅಡಿಗಳಷ್ಟು ಉದ್ದವಾಗಿದ್ದು ೯೦ ಕಿಲೋಗ್ರಾಂವರೆಗೆ ತೂಗಬಲ್ಲವು. ಏಷ್ಯಾದ ಆನೆಗಳಲ್ಲಿ ಗಂಡಿಗೆ ಮಾತ್ರ ದೊಡ್ಡ ದಂತಗಳಿರುತ್ತವೆ. ಹೆಣ್ಣಾನೆಯ ದಂತಗಳು ಅತಿ ಸಣ್ಣವು ಅಥವಾ ಇಲ್ಲವೇ ಇಲ್ಲ. ಗಂಡಾನೆಯ ದಂತದ ಉದ್ದವು ಆಫ್ರಿಕಾದ ಆನೆಯ ದಂತದಷ್ಟು ಉದ್ದವಾಗಿರಬಹುದಾದರೂ ಅವು ಸಣಕಲಾಗಿದ್ದು ಹಗುರವಾಗಿರುತ್ತವೆ. ಇದುವರೆಗೆ ದಾಖಲಾದ ಅತಿ ಭಾರದ ಏಷ್ಯಾದ ಆನೆಯ ದಂತವು ೩೯ ಕಿಲೋಗ್ರಾಂ ತೂಗಿತ್ತು. ಎರಡೂ ಜಾತಿಗಳ ದಂತವು ಸಾಮಾನ್ಯವಾಗಿ ಅಪಟೈಟ್ ರೂಪದಲ್ಲಿರುವ ಕ್ಯಾಲ್ಸಿಯಂ ಫಾಸ್ಫೇಟ್ ನಿಂದ ತಯಾರಾಗಿರುತ್ತದೆ. ಜೀವಂತ ಅಂಗಾಂಶದಲ್ಲಿರುವ ಈ ವಸ್ತುವು ಪ್ರಕೃತಿಯಲ್ಲಿ ದೊರೆಯುವ ಅದೇ ಖನಿಜಕ್ಕಿಂತ ಮೆದುವಾಗಿದ್ದು ಕೆತ್ತನೆ ಮತ್ತು ಕುಸುರಿ ಕೆಲಸಗಳಿಗೆ ಅನುಕೂಲಕರವಾಗಿರುವುದು. ದಂತದ ಮೇಲೆ ಮಾನವನಿಗಿರುವ ಮೋಹವೇ ಆನೆಗಳಿಗಿಂದು ಕುತ್ತಾಗಿದೆ.

ಹಲ್ಲುಗಳು

[ಬದಲಾಯಿಸಿ]
ಏಷ್ಯಾದ ಆನೆಯ ಹಲ್ಲು

ಆನೆಗಳ ಹಲ್ಲು ಇತರ ಸಸ್ತನಿಗಳಿಗಿಂತ ಬಲು ವಿಭಿನ್ನವಾಗಿರುತ್ತವೆ. ಸಾಮಾನ್ಯವಾಗಿ ಆನೆಗಳು ತಮ್ಮ ಜೀವಿತಾವಧಿಯಲ್ಲಿ ೨೮ ಹಲ್ಲುಗಳನ್ನು ಹೊಂದಿರುತ್ತವೆ. ಅವೆಂದರೆ :

  • ಮೇಲ್ದವಡೆಯ ಎರಡು ದ್ವಿತೀಯ ಕೋರೆಹಲ್ಲುಗಳು - ಇವೇ ದಂತಗಳು.
  • ದಂತದ ಮೊದಲ ಹಾಲುಹಲ್ಲುಗಳು
  • ೧೨ ಅರೆದವಡೆ ಹಲ್ಲುಗಳು (ತಲಾ ೩ ರಂತೆ ಎರಡೂ ದವಡೆಗಳ ಎರಡೂ ಪಾರ್ಶ್ವಗಳಲ್ಲಿ )
  • ೧೨ ದವಡೆ ಹಲ್ಲುಗಳು (ತಲಾ ೩ ರಂತೆ ಎರಡೂ ದವಡೆಗಳ ಎರಡೂ ಪಾರ್ಶ್ವಗಳಲ್ಲಿ )

ಇತರ ಸಸ್ತನಿಗಳಲ್ಲಿ ಮರಿಗೆ ಮೊದಲು ಹಾಲುಹಲ್ಲುಗಳು ಮೂಡಿ ನಂತರ ಶಾಶ್ವತವಾದ ಹಲ್ಲುಗಳ ಪಂಕ್ತಿ ಮೂಡುವುದು. ಆದರೆ ಆನೆಯ ಹಲ್ಲುಗಳು ಜೀವನಪರ್ಯಂತ ವಿಶಿಷ್ಟ ಚಕ್ರವನ್ನು ಹೊಂದಿವೆ. ಜನನದ ಒಂದು ವರ್ಷದ ಬಳಿಕ ಆನೆಯ ದಂತಗಳು ಶಾಶ್ವತ. ಆದರೆ ದವಡೆಯ ಹಲ್ಲುಗಳು ಜೀವನಾವಧಿಯಲ್ಲಿ ೬ ಬಾರಿ ಉದುರಿ ಮತ್ತೆ ಮೊಳೆಯುತ್ತವೆ. ಮಾನವನಲ್ಲಿ ಹಲ್ಲುಗಳು ದವಡೆಯಿಂದ ಲಂಬವಾಗಿ ಹೊರಮೂಡಿದರೆ ಆನೆಗಳಲ್ಲಿ ಇವು ಬಾಯಿಯ ಹಿಂಭಾಗದಲ್ಲಿ ಮೊಳೆತು ಮುಂದಕ್ಕೆ ಬೆಳೆಯತೊಡಗುತ್ತವೆ. ಈ ಹಲ್ಲುಗಳು ತಮ್ಮ ಮುಂದಿರುವ ಮೊದಲಿನ ಹಲ್ಲುಗಳನ್ನು ಮುಂದೆ ತಳ್ಳುವುವು. ಹೀಗೆ ಮುಂದೆ ಬಂದಿರುವ ಹಲ್ಲುಗಳು ಸತತ ಉಪಯೋಗದಿಂದ ಸವೆದು ಒಂದು ದಿನ ಉದುರಿಹೋಗುತ್ತವೆ. ನಂತರ ಹಿಂದೆ ಇದ್ದ ಹಲ್ಲು ಮುಂದಿನದರ ಸ್ಥಾನ ಪಡೆಯುವುದು. ಈ ಚಕ್ರ ಹೀಗೆಯೇ ಸಾಗುತ್ತಿರುವುದು. ಅತಿ ವೃದ್ಧ ಆನೆಯ ಕೊನೆಯ ಸಲದ ಹಲ್ಲುಗಳ ಪಂಕ್ತಿಯು ಪೂರ್ಣವಾಗಿ ಹೊರಬರದೆ ಹಲ್ಲುಗಳ ಬುಡದಲ್ಲಿಯೇ ಉಳಿದುಬಿಡುತ್ತದೆ. ಆದ್ದರಿಂದ ಈ ಆನೆಗಳು ಜಗಿಯಲು ಮೆದು ಆಹಾರವನ್ನೇ ಹುಡುಕಬೇಕಾಗುವುದು. ಸಾಮಾನ್ಯವಾಗಿ ಈ ವೃದ್ಧ ಆನೆಗಳು ತಮ್ಮ ಜೀವನದ ಕೊನೆಯ ಕೆಲ ವರ್ಷಗಳನ್ನು ತೇವಭರಿತ ಜೌಗುಪ್ರದೇಶದಲ್ಲಿ ಕಳೆಯುವುವು. ಈ ಪ್ರದೇಶದಲ್ಲಿರುವ ಮೆದು ಮತ್ತು ಒದ್ದೆ ಹುಲ್ಲು ಇವುಗಳಿಗೆ ಆಹಾರವೊದಗಿಸುವುದು. ಕೊನೆಯಲ್ಲಿ ಅಂತಿಮ ಹಲ್ಲುಗಳು ಸಹ ಉದುರಿಹೋದಾಗ ಆನೆಯು ಏನನ್ನೂ ತಿನ್ನಲು ಅಸಮರ್ಥವಾಗಿ ನಿರಾಹಾರಿಯಾಗಿ ಮರಣಿಸುತ್ತದೆ. ಕೆಳದವಡೆಯ ಎರಡು ಕೋರೆಹಲ್ಲುಗಳು ಸಹ ದಂತಗಳು. ಅತಿ ಪ್ರಾಚೀನ ಕಾಲದಲ್ಲಿ ಕೆಲವು ಜಾತಿಯ ಆನೆಗಳಲ್ಲಿ ಇವು ಕೂಡ ಬಾಯಿಯ ಹೊರಗೆ ಚಾಚುತ್ತಿದ್ದುವು. ಆದರೆ ಇಂದಿನ ಆನೆಗಳಲ್ಲಿ ಇವು ಬಲು ಬೇಗ ಮರೆಯಾಗುತ್ತವೆ.

ಆಫ್ರಿಕಾದ ಆನೆಯ ಚರ್ಮ

ಆನೆಗೆ ಪಾಚಿಡರ್ಮ್ ಅಥವಾ ದಪ್ಪಚರ್ಮದ ಪ್ರಾಣಿ ಎಂಬ ಹೆಸರೂ ಇದೆ. ಆನೆಯ ಚರ್ಮ ಅತ್ಯಂತ ಗಟ್ಟಿಯಾಗಿದ್ದು ಶರೀರದ ಬಹುತೇಕ ಕಡೆ ಚರ್ಮದ ದಪ್ಪ ಒಂದು ಅಂಗುಲದಷ್ಟಿರುತ್ತದೆ. ಆದರೆ ಬಾಯಿಯ ಸುತ್ತ ಮತ್ತು ಕಿವಿಗಳ ಒಳಭಾಗದಲ್ಲಿ ಚರ್ಮವು ಅತಿ ತೆಳುವಾಗಿರುವುದು. ಏಷ್ಯಾದ ಆನೆಯು ಚರ್ಮದ ಮೇಲೆ ಆಫ್ರಿಕಾದ ಆನೆಗಿಂತ ಹೆಚ್ಚು ಕೂದಲನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಮರಿಯಾನೆಯು ಕೆಂಬೂದು ಬಣ್ಣದ ರೋಮರಾಜಿಯಿಂದ ಆವೃತವಾಗಿರುತ್ತದೆ. ವಯಸ್ಸಾದಂತೆ ಈ ಕೂದಲಿನ ಬಣ್ಣ ಗಾಢವಾಗಿ ಮತ್ತು ಕೂದಲು ಕಡಿಮೆಯಾಗುತ್ತ ಹೋಗುವುದು. ಆದರೆ ತಲೆಯ ಮೇಲ್ಭಾಗದಲ್ಲಿ ಮತ್ತು ಬಾಲದಲ್ಲಿ ಯಾವಾಗಲೂ ಕೂದಲಿರುವುದು. ಸಾಮಾನ್ಯವಾಗಿ ಆನೆಗಳ ಮೈಬಣ್ಣ ಬೂದು ಅಥವಾ ಸಾದುಗಪ್ಪು. ಆದರೆ ಆಫ್ರಿಕಾದ ಆನೆಗಳು ಹಲವು ವೇಳೆ ಕಂದು ಇಲ್ಲವೇ ತಿಳಿಗೆಂಪಾಗಿ ಕಾಣುವುವು. ಕೆಸರುಗುಂಡಿಗಳಲ್ಲಿ ಹೊರಳಾಡುವುದೇ ಇದಕ್ಕೆ ಕಾರಣ. ಈ ಕೆಸರಿನ ಕವಚವು ಆನೆಗೆ ಸೂರ್ಯನ ಅತಿನೇರಳೆ ಕಿರಣಗಳಿಂದ ಮತ್ತು ಕ್ರಿಮಿಕೀಟಗಳಿಂದ ರಕ್ಷಣೆ ಒದಗಿಸುತ್ತದೆ. ಆನೆಗಳು ಸ್ನಾನದ ನಂತರ ತಪ್ಪದೆ ಮೈಮೇಲೆ ಧೂಳು ಮತ್ತು ಮಣ್ಣನ್ನು ಎರಚಿಕೊಳ್ಳುತ್ತವೆ. ಕೆಸರಿನ ಕ್ರೀಡೆಯು ಆನೆಗೆ ತನ್ನ ದೇಹದ ಹೆಚ್ಚುವರಿ ಉಷ್ಣವನ್ನು ಹೊರಹಾಕುವಲ್ಲಿ ಸಹಕಾರಿಯಾಗಿದೆ. ತನ್ನ ಶರೀರದ ಗಾತ್ರಕ್ಕೆ ಹೋಲಿಸಿದರೆ ಅತಿ ಕಡಿಮೆ ಮೇಲ್ಮೈ ಚರ್ಮವನ್ನು ಹೊಂದಿರುವುದರಿಂದ ಆನೆಗೆ ತನ್ನೊಳಗಿನ ಎಲ್ಲ ಹೆಚ್ಚುವರಿ ತಾಪವನ್ನು ಚರ್ಮದ ಮೂಲಕ ಹೊರದಬ್ಬಲು ಸಾಧ್ಯವಿಲ್ಲ.

ಕಾಲುಗಳು ಮತ್ತು ಪಾದಗಳು

[ಬದಲಾಯಿಸಿ]

ಆನೆಯ ಕಾಲುಗಳು ನೇರವಾದ ದೊಡ್ಡ ಕಂಬಗಳಂತೆ ಇರುತ್ತವೆ. ಶರೀರದ ಮಹಾಭಾರವನ್ನು ಹೊರಬೇಕಾದ್ದರಿಂದ ಇವು ಅವಶ್ಯಕವೂ ಹೌದು. ಕಾಲುಗಳು ಹೆಚ್ಚೂಕಡಿಮೆ ನೇರವಾಗಿರುವುದರಿಂದ ಮತ್ತು ಪಾದಗಳು ಅಗಲವಾಗಿ ಮೊರದಂತಿರುವುದರಿಂದ ಆನೆಗೆ ನಿಂತುಕೊಳ್ಳಲು ಬಹಳ ಶಕ್ತಿ ವ್ಯಯಿಸಬೇಕಾಗುವುದಿಲ್ಲ. ಈ ಕಾರಣದಿಂದಾಗಿಯೆ ಆನೆಗಳು ಬಹು ದೀರ್ಘಕಾಲ ಆಯಾಸಪಡದೇ ನಿಂತಿರಬಲ್ಲವು. ಖಾಯಿಲೆಗಳು ಮತ್ತು ಗಾಯಗಳು ಇಲ್ಲದಿದ್ದರೆ ಆಫ್ರಿಕಾದ ಆನೆಗಳು ಮಲಗುವುದೇ ಇಲ್ಲ. ಸದಾಕಾಲ ನಿಂತೇ ಇರುತ್ತವೆ. ಆದರೆ ಏಷ್ಯಾದ ಆನೆಗಳು ಆಗಾಗ ಮಲಗುವುವು. ಆನೆಯ ಪಾದವು ಸರಿಸುಮಾರು ವರ್ತುಲಾಕಾರದಲ್ಲಿದೆ. ಆಫ್ರಿಕಾದ ಆನೆಗಳಿಗೆ ಹಿಂಗಾಲಿನ ಪಾದಗಳಲ್ಲಿ ತಲಾ ಮೂರು ಮತ್ತು ಮುಂಗಾಲಿನ ಪಾದಗಳಲ್ಲಿ ತಲಾ ನಾಲ್ಕು ಉಗುರುಗಳಿರುತ್ತವೆ. ಪಾದದ ಮೂಳೆಗಳ ಅಡಿಯಲ್ಲಿ ಅತಿ ಕಠಿಣವಸ್ತುವಿನಿಂದ ಮಾಡಲ್ಪಟ್ಟ ಪದರವೊಂದಿದೆ. ಈ ಪದರವು ಪಾದಗಳಿಗೆ ಆಘಾತ ಸಹಿಸಿಕೊಳ್ಳುವಲ್ಲಿ ನೆರವಾಗುವುದು. ಇನ್ನೊಂದು ವಿಶಿಷ್ಟ ಸಂಗತಿಯೆಂದರೆ ಪಾದದ ಮೇಲೆ ಆನೆಯ ಭಾರ ಬಿದ್ದಾಗ ಪಾದಗಳು ಊದುತ್ತವೆ ಮತ್ತು ಭಾರ ಇಲ್ಲವಾದಾಗ ಕಿರಿದಾಗುತ್ತವೆ. ಈ ವಿದ್ಯಮಾನದಿಂದಾಗಿಯೇ ಎಷ್ಟೇ ಆಳದ ಕೆಸರಿಗೆ ಇಳಿದರೂ ಆನೆಯು ಸುಲಭವಾಗಿ ತನ್ನ ಕಾಲುಗಳನ್ನು ಹೊರಗೆ ಎಳೆದುಕೊಳ್ಳಬಲ್ಲುದೆಂದು ಹೇಳಲಾಗುತ್ತದೆ. ಆನೆಯು ಒಂದು ಉತ್ತಮ ಈಜುಗಾರ ಪ್ರಾಣಿ. ಆದರೆ ಆನೆಯು ಎಗರುವುದು ಅಥವಾ ನಾಗಾಲೋಟ ಮಾಡುವುದಾಗಲೀ ಸಾಧ್ಯವಿಲ್ಲ. ಸಾಮಾನ್ಯದ ನಡಿಗೆ ಮತ್ತು ತೀವ್ರಗತಿಯ ನಡಿಗೆ (ಓಡುವಿಕೆಯೆನ್ನಬಹುದು) ಮಾತ್ರ ಆನೆಗೆ ಸಾಧ್ಯ. ನಡಿಗೆಯ ಅಥವಾ ಓಟದ ಸಮಯದಲ್ಲಿ ಕನಿಷ್ಠ ಒಂದಾದರೂ ಕಾಲು ನೆಲದ ಮೇಲೆ ಊರಿಯೇ ಇರುವುದು. ಆದ್ದರಿಂದಲೇ ಆನೆಯ ಓಟ ನಿಜವಾದ ಓಟವಲ್ಲ. ಈ ಓಟದ ವೇಗ ಹಲವೊಮ್ಮೆ ಗಂಟೆಗೆ ೨೫ ಕಿ.ಮೀ. ವೇಗ ತಲುಪಬಲ್ಲುದು. ಆನೆಯ ಸಾಮಾನ್ಯ ನಡಿಗೆಯ ವೇಗ ಗಂಟೆಗೆ ೩ ರಿಂದ ೬ ಕಿ.ಮೀ.

ಕಿವಿಗಳು

[ಬದಲಾಯಿಸಿ]

ಆನೆಯು ಅಗಲವಾದ ಮೊರದಂತಹ ಕಿವಿಗಳನ್ನು ಹೊಂದಿದೆ. ಈ ಕಿವಿಗಳು ಅತಿ ತೆಳು ಚರ್ಮ ಮತ್ತು ರಕ್ತನಾಳಗಳ ಒಂದು ದೊಡ್ಡ ಜಾಲವನ್ನು ಹೊಂದಿರುತ್ತವೆ. ಆನೆಗೆ ತನ್ನ ದೇಹದ ತಾಪಮಾನವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಈ ಕಿವಿಗಳು ಬಲು ಆವಶ್ಯಕ. ಬಿಸಿ ಹೆಚ್ಚಿರುವ ದಿನಗಳಲ್ಲಿ ಆನೆಗಳು ತಮ್ಮ ಕಿವಿಗಳನ್ನು ಸದಾ ಬೀಸುತ್ತಲೇ ಇರುತ್ತವೆ. ಈ ಬೀಸುವಿಕೆಯಿಂದ ಕಿವಿಯ ಪರಿಸರದಲ್ಲಿ ಕೊಂಚ ತಂಪು ಹವೆಯ ಸೃಷ್ಠಿಯಾಗುವುದು. ಈ ತಂಪು ಹವೆಯು ಕಿವಿಯಲ್ಲಿರುವ ರಕ್ತನಾಳಗಳನ್ನು ಮತ್ತು ಅವುಗಳೊಳಗಿನ ರಕ್ತವನ್ನು ತಂಪಾಗಿಸುವುದು. ನಂತರ ಈ ತಂಪು ರಕ್ತವು ಶರೀರದ ಇತರ ಭಾಗಗಳಿಗೆ ಒಯ್ಯಲ್ಪಡುವುದು. ಹೀಗೆ ಕಿವಿಯೊಳಗೆ ಸಾಗಿಬರುವ ಬಿಸಿರಕ್ತವು ಸುಮಾರು ೧೦ ಡಿಗ್ರಿ ಫ್ಯಾರನ್ ಹೀಟ್ ಗಳಷ್ಟು ತಣ್ಣಗಾಗಬಲ್ಲುದು. ಅತಿ ಬಿಸಿ ವಾತಾವರಣವುಳ್ಳ ಭೂಮಧ್ಯರೇಖೆಯ ಆಸುಪಾಸಿನಲ್ಲಿ ಹೆಚ್ಚಾಗಿ ವಾಸಿಸುವ ಆಫ್ರಿಕಾದ ಆನೆಗಳು ಈ ಕಾರಣಕ್ಕಾಗಿಯೇ ಹೆಚ್ಚು ಅಗಲವಾದ ಕಿವಿಗಳನ್ನು ಹೊಂದಿದ್ದರೆ, ಕಡಿಮೆ ಉಷ್ಣದ ಪರಿಸರದಲ್ಲಿ ಜೀವಿಸುವ ಏಷ್ಯಾದ ಆನೆಗಳ ಕಿವಿಗಳು ಸ್ವಲ್ಪ ಚಿಕ್ಕದಾಗಿರುತ್ತವೆ.

ವಿಕಾಸ

[ಬದಲಾಯಿಸಿ]
ಆನೆಯ ವಿಕಾಸ - ಪ್ರಾಚೀನ ಇಯೊಸೀನ್ ದಿಂದ ಇಂದಿನದರವರೆಗೆ.

ಯುಗಗಳ ಹಿಂದೆ ಜೀವಿಸಿದ್ದ ಸಮುದ್ರ ಪಶು ಮತ್ತು ಹೈರಾಕ್ಸ್ ಗಳೊಂದಿಗೆ ಇಂದಿನ ಆನೆಗಳು ಕೆಲಸಂಬಂಧಗಳನ್ನು ಹೊಂದಿವೆಯೆಂದು ಜೀವವಿಕಾಸ ತಜ್ಞರು ಹೇಳುತ್ತಾರೆ. ಇಂದಿನ ಮೂರೂ ಪ್ರಭೇಧಗಳ ಆನೆಗಳಿಗೂ ಅಂದಿನ ಒಂದೇ ಪ್ರಾಣಿಯೇ ಮೂಲವಾಗಿತ್ತೆಂದು ಸಹ ಹೇಳಲಾಗುವುದು. ಅಲ್ಲದೆ ಈ ಪ್ರಾಣಿಯು ತನ್ನ ಹೆಚ್ಚಿನ ಕಾಲವನ್ನು ನೀರಿನ ಒಳಗೆಯೇ ಕಳೆಯುತ್ತಿತ್ತೆಂದು ಊಹೆ. ನೀರಿನ ಒಳಗೆ ಇರುತ್ತಿದ್ದ ಸಮಯದಲ್ಲಿ ತನ್ನ ಸೊಂಡಿಲನ್ನು ಮಾತ್ರ ನೀರಿನಿಂದ ಹೊರಕ್ಕೆ ಚಾಚಿ ಗಾಳಿ ತೆಗೆದುಕೊಳ್ಳುತ್ತಿತ್ತೆಂದು ಸಹ ಒಂದು ವಾದ. ಆದರೆ ಈ ಕಲ್ಪಿತ ಜೀವಿಗಳ ಬಗ್ಗೆ ಯಾವುದೇ ಪಳೆಯುಳಿಕೆಗಳು ದೊರೆತಿಲ್ಲ. ಇಂದು ಸಹ ಆನೆಗಳು ಈ ರೀತಿಯಾಗಿ ೬ ಗಂಟೆಗಳ ವರೆಗೆ ನೀರಿನಲ್ಲಿ ಇರಬಲ್ಲವು.

ಆನೆಗಳು ಸಂಪೂಣ೯ ಸಸ್ಯಾಹಾರಿಗಳು. ದಿನದಲ್ಲಿ ೧೬ ಗಂಟೆಗಳಷ್ಟು ಸಮಯವನ್ನು ಆಹಾರಸಂಗ್ರಹಣೆಯಲ್ಲಿಯೇ ಕಳೆಯುತ್ತವೆ. ಆನೆಗಳ ಆಹಾರದಲ್ಲಿ ಅರ್ಧಭಾಗದಷ್ಟು ಹುಲ್ಲು ಉಳಿದಂತೆ ಎಲೆಗಳು, ಚಿಗುರು, ಬೇರುಗಳು ಮತ್ತು ಸ್ವಲ್ಪ ಪ್ರಮಾಣದಲ್ಲಿ ಹಣ್ಣುಗಳು ಬೀಜಗಳು ಹಾಗೂ ಹೂವುಗಳು ಇರುತ್ತವೆ. ತಾನು ತಿಂದ ಆಹಾರದಲ್ಲಿ ೪೦% ಭಾಗದಷ್ಟನ್ನು ಮಾತ್ರ ಆನೆಯು ಜೀರ್ಣಿಸಕೊಳ್ಳಬಲ್ಲುದಾದ್ದರಿಂದ ದೊಡ್ಡಪ್ರಮಾಣದಲ್ಲಿ ತಿನ್ನಲೇಬೇಕಾಗುವುದು. ಪ್ರತಿದಿನ ಸುಮಾರು ೨೭೦ ಕಿಲೋಗ್ರಾಂ ಗಳಷ್ಟು ಆಹಾರವನ್ನು ಆನೆಯು ತಿನ್ನಬಲ್ಲುದು. ಆದರೆ ಇದರಲ್ಲಿ ೬೦% ಭಾಗ ಜೀರ್ಣವಾಗದೇ ಶರೀರದಿಂದ ತ್ಯಜಿಸಲ್ಪಡುತ್ತದೆ.

ಬುದ್ಧಿಮತ್ತೆ

[ಬದಲಾಯಿಸಿ]
ಮಾನವ,ಡಾಲ್ಪ್ಹಿನ್ ಮತ್ತು ಆನೆಯ ಮೆದುಳು. (1)-cerebrum (1a)-temporal lobe and (2)-cerebellum

ಐದು ಕಿಲೋಗ್ರಾಂಗಳಷ್ಟು ತೂಕವಿರುವ ಆನೆಯ ಮೆದುಳು ನೆಲದ ಮೇಲಿನ ಯಾವುದೇ ಪ್ರಾಣಿಯ ಮೆದುಳಿಗಿಂತ ದೊಡ್ಡದು. ಆನೆಯು ಅತಿ ಬುದ್ಧಿಶಾಲಿಯಾದ ಪ್ರಾಣಿಯೆಂದು ಹೆಸರಾಗಿದೆ. ದುಃಖ , ಆಟ, ಸಲಕರಣೆಗಳ ಉಪಯೋಗ, ಮಮಕಾರ ಮತ್ತು ತನ್ನರಿವು ಇವುಗಳಲ್ಲಿ ಆನೆಯು ಚಾಣಾಕ್ಷತೆಯನ್ನು ಪ್ರದರ್ಶಿಸುತ್ತದೆ. ಈ ವಿಚಾರಗಳಲ್ಲಿ ಮಾನವನೂ ಸೇರಿದಂತೆ ಬುದ್ಧಿವಿಕಾಸಗೊಂಡ ಪ್ರಾಣಿಗಳೊಡನೆ ಸಾಮ್ಯತೆ ಇದೆ. ಆನೆಯ ಕಿವಿ ಬಲು ಸೂಕ್ಷ್ಮ ಮತ್ತು ವಾಸನಾಗ್ರಹಣ ಶಕ್ತಿ ಕೂಡ.

ಇಂದ್ರಿಯಗಳು

[ಬದಲಾಯಿಸಿ]

ಆನೆಯ ಸೊಂಡಿಲು ವ್ಯಾಪಕವಾಗಿ ನರಗಳ ಜಾಲನ್ನು ಹೊಂದಿದೆ. ಇದರಿಂದಾಗಿ ಆನೆಯ ಶ್ರವಣಶಕ್ತಿ ಮತ್ತು ಘ್ರಾಣಶಕ್ತಿಗಳು ಅತಿಶಯವಾದವು. ಶ್ರವಣಸಾಧನಗಳು ಕಿವಿಯಲ್ಲಿ ಮಾತ್ರವಲ್ಲದೆ ಸೊಂಡಿಲಿನಲ್ಲಿ ಸಹ ಇವೆ. ಇವು ಯಾವುದೇ ಅದುರುವಿಕೆಯನ್ನು ಗ್ರಹಿಸಬಲ್ಲವು. ಅಲ್ಲದೆ ಆನೆಯ ಪಾದಗಳು ಸಹ ಉತ್ತಮ ನರಜಾಲವನ್ನು ಹೊಂದಿದ್ದು ಕಡಿಮೆ ಆವರ್ತನದ ಅಲೆ/ಸಂಕೇತಗಳನ್ನು ಗ್ರಹಿಸಲು ಅನುಕೂಲಕರವಾಗಿರುವ ಗ್ರಾಹಕಗಳನ್ನು ಹೊಂದಿವೆ. ಆನೆಗಳು ತಮ್ಮ ಸಾಮಾಜಿಕ ಜೀವನ ಅಂಗವಾಗಿ ಪರಸ್ಪರರ ಮಧ್ಯೆ ಬಲು ದೂರದವರೆಗೆ ನೆಲದ ಮಾರ್ಗವಾಗಿ ಶಬ್ದಸಂಪರ್ಕವಿರಿಸಿಕೊಳ್ಳುತ್ತವೆಯೆಂದು ನಂಬಲಾಗಿದೆ. ಅಲ್ಲದೇ ಆನೆಗಳು ತಮ್ಮ ಸೊಂಡಿಲನ್ನು ನೆಲಕ್ಕೆ ತಾಗಿಸಿ ಮತ್ತು ತಮ್ಮ ಸೂಕ್ಷ್ಮವಾದ ಪಾದಗಳನ್ನು ಅತಿ ಜಾಗರೂಕತೆಯಿಂದ ಅಲುಗಿಸುತ್ತಾ ಶಬ್ದತರಂಗಗಳನ್ನು ಗ್ರಹಿಸುವುದು ಕಂಡುಬಂದಿದೆ.

ಸಾಮಾಜಿಕ ನಡವಳಿಕೆ

[ಬದಲಾಯಿಸಿ]
ಆನೆಯ ಹೆಜ್ಜೆಯ ಗುರುತುಗಳು (ನೈಜ ಪ್ರಮಾಣದಲ್ಲಿಲ್ಲ)

ಆನೆಗಳು ಒಂದು ವ್ಯವಸ್ಥಿತ ಸಾಮಾಜಿಕ ಕಟ್ಟಳೆಯಡಿ ಬಾಳುತ್ತವೆ. ಗಂಡಿನ ಮತ್ತು ಹೆಣ್ಣಿನ ಸಾಮಾಜಿಕ ಜೀವನಗಳು ಬಲು ಭಿನ್ನವಾಗಿರುವುವು. ಹೆಣ್ಣಾನೆಗಳು ತಮ್ಮ ಸಂಪೂರ್ಣ ಜೀವನವನ್ನು ಒಂದು ನಿಕಟವಾಗಿ ಬಂಧಿಸಲ್ಪಟ್ಟ ಕುಟುಂಬದಲ್ಲಿಯೇ ಕಳೆಯುತ್ತವೆ. ಈ ಕುಟುಂಬವು ಕೇವಲ ಹೆಣ್ಣಾನೆಗಳನ್ನು ಮಾತ್ರ ಒಳಗೊಂಡಿದ್ದು ತಾಯಿ, ಮಗಳು, ಸಹೋದರಿಯರು, ಸೋದರತ್ತೆ ಮತ್ತು ಚಿಕ್ಕಮ್ಮಂದಿರನ್ನು ಒಳಗೊಂಡಿರುತ್ತದೆ. ಗುಂಪಿನಲ್ಲಿ ಅತಿ ಹೆಚ್ಚು ವಯಸ್ಸಾದ ಆನೆಯು ಈ ಕುಟುಂಬದ ಯಜಮಾನಿಯಾಗಿ ಪ್ರಧಾನಮಾತೃವಿನ ಸ್ಥಾನದಲ್ಲಿರುವುದು. ಇದಕ್ಕೆ ವಿಪರೀತವಾಗಿ ವಯಸ್ಕ ಗಂಡಾನೆಗಳು ಸಾಮಾನ್ಯವಾಗಿ ಒಂಟಿಯಾಗಿಯೇ ಬಾಳುತ್ತವೆ. ಹೆಣ್ಣಾನೆಯ ಸಾಮಾಜಿಕ ವಲಯವು ತನ್ನ ಸಣ್ಣ ಕುಟುಂಬಕ್ಕೇ ಸೀಮಿತವಾಗಿರುವುದಿಲ್ಲ. ತನ್ನ ಗುಂಪಿನ ಆಸುಪಾಸಿನಲ್ಲಿ ಸುಳಿದಾಡುವ ಗಂಡಾನೆಗಳು ಮತ್ತು ಇತರ ಗುಂಪುಗಳು ಇವುಗಳೊಡನೆಯೂ ಸಂಪರ್ಕವಿರಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಹೆಣ್ಣಾನೆಗಳ ಕುಟುಂಬವು ೫ ರಿಂದ ೧೫ ವಯಸ್ಕ ಹೆಣ್ಣಾನೆಗಳು ಮತ್ತು ಅನೇಕ ಎಳೆಯ ಮಕ್ಕಳನ್ನು (ಗಂಡು ಮತ್ತು ಹೆಣ್ಣು) ಒಳಗೊಂಡಿರುವುದು. ಕುಟುಂಬವು ಬಲು ದೊಡ್ಡದಾಗಿ ಬೆಳೆದಾಗ ಕೆಲ ಮಗಳು ಆನೆಗಳು ಗುಂಪಿನಿಂದ ಹೊರಬಂದು ತಮ್ಮದೇ ಆದ ಹೊಸ ಕುಟುಂಬವನ್ನು ರೂಪಿಸಿಕೊಳ್ಳುತ್ತವೆ. ಈ ಕುಟುಂಬಗಳಿಗೆ ಸುತ್ತಲಿನ ಹಿಂಡುಗಳಲ್ಲಿ ಯಾವುವು ತಮ್ಮ ಬಂಧುಗಳು ಹಾಗೂ ಯಾವುವು ಅಲ್ಲವೆಂಬ ಅರಿವಿರುತ್ತದೆ. ಗಂಡಾನೆಯ ಜೀವನವು ಇದಕ್ಕಿಂತ ಸಂಪೂರ್ಣವಾಗಿ ಬೇರೆಯಾಗಿರುತ್ತವೆ. ತನ್ನ ತಾಯಿಯ ಗುಂಪಿನಲ್ಲಿ ಬೆಳೆಯುವ ಇದು ವಯಸ್ಸಾದಂತೆ ಕ್ರಮೇಣ ಗುಂಪಿನ ಅಂಚಿಗೆ ಸರಿಯತೊಡಗಿ ಕೆಲವೊಮ್ಮೆ ಗಂಟೆಗಳವರೆಗೆ ಯಾ ದಿನಗಳವರೆಗೆ ಕುಟುಂಬದಿಂದ ದೂರವುಳಿಯಲಾರಂಭಿಸುತ್ತದೆ. ಕಾಲ ಸರಿದಂತೆ ಹೀಗೆ ಕುಟುಂಬದ ಹೊರಗಿರುವ ಅವಧಿ ಹೆಚ್ಚಾಗತೊಡಗಿ ೧೪ನೆಯ ವಯಸ್ಸಿನ ಸುಮಾರಿಗೆ ಗಂಡಾನೆ ತನ್ನ ಕುಟುಂಬವನ್ನು ತೊರೆಯುತ್ತದೆ. ಹೆಚ್ಚೂಕಡಿಮೆ ಒಂಟಿಯಾಗಿಯೇ ಬಾಳುವ ಗಂಡಾನೆಗಳು ಆಗಾಗ ತಮ್ಮದೇ ಹಿಂಡನ್ನು ರೂಪಿಸುವುದೂ ಇದೆ. ಇಂತಹ ಹಿಂಡನ್ನು ಬ್ರಹ್ಮಚಾರಿ ಹಿಂಡು ಎಂದು ಕರೆಯಲಾಗುತ್ತದೆ. ಗಂಡಾನೆಗಳು ಹೆಚ್ಚಿನ ಸಮಯವನ್ನು ತಮ್ಮ ಪ್ರಾಬಲ್ಯ ಸಾಧಿಸುವುದಕ್ಕಾಗಿ ಇತರ ಗಂಡಾನೆಗಳೊಡನೆ ಕಾದಾಡುವುದರಲ್ಲಿಯೇ ಕಳೆಯುವುವು. ಆನೆಗಳ ವಂಶಾಭಿವೃದ್ಧಿ ಪ್ರಕ್ರಿಯೆಯ ದೃಷ್ಟಿಯಲ್ಲಿ ಇದು ಅವಶ್ಯ. ಏಕೆಂದರೆ ಕೇವಲ ಅತಿ ಪ್ರಬಲ ಗಂಡಾನೆಗಳಿಗೆ ಮಾತ್ರ ಹೆಣ್ಣಾನೆಗಳೊಂದಿಗೆ ಸಂಗಮಿಸುವ ಅವಕಾಶವಿರುವುದು. ಉಳಿದವು ತಮ್ಮ ಸರದಿಗಾಗಿ ಕಾಯಲೇಬೇಕು. ಸಾಮಾನ್ಯವಾಗಿ ೪೦ ರಿಂದ ೫೦ ವರ್ಷ ವಯಸ್ಸಾಗಿರುವ ಬಲಿಷ್ಟ ಗಂಡಾನೆಗಳು ಹೆಚ್ಚಿನ ವಂಶಾಭಿವೃದ್ಧಿಯ ಕಾರ್ಯ ನಡೆಸುತ್ತವೆ.

ಕೆನ್ಯಾದ ಸಂಬುರು ರಾಷ್ಟ್ರೀಯ ಉದ್ಯಾನದಲ್ಲಿ ಮರಕ್ಕಾತು ನಿಂತಿರುವ ಆನೆ.
ಟಾಂಜಾನಿಯಾದ ಗೊರೊಂಗೋರೋದಲ್ಲಿ ಒಂದು ಆನೆ.

ಪ್ರಾಬಲ್ಯಕ್ಕಾಗಿ ಗಂಡಾನೆಗಳ ನಡುವೆ ನಡೆಯುವ ಕದನ ಘೋರವಾಗಿ ಕಾಣಬಹುದಾದರೂ ಇವು ಪರಸ್ಪರರಿಗೆ ಹೆಚ್ಚಾಗಿ ದೈಹಿಕ ಗಾಯಗಳನ್ನುಂಟುಮಾಡುವುದಿಲ್ಲ. ತಮ್ಮ ಬಲ ಮತ್ತು ಆಕ್ರಮಣಕಾರಿ ಪ್ರವೃತ್ತಿಯ ಪ್ರದರ್ಶನ ಮಾತ್ರ ನಡೆಯುವುದು. ಇಷ್ಟರಿಂದಾಗಿಯೇ ಆನೆಗಳು ಎದುರಾಳಿಯ ಶಕ್ತಿಯ ಅಂದಾಜು ಮಾಡಿಕೊಳ್ಳುತ್ತವೆ ಮತ್ತು ದುರ್ಬಲ, ಎಳೆಯ ಹಾಗೂ ಆತ್ಮವಿಶ್ವಾಸ ಕಡಿಮೆಯಿರುವ ಆನೆಗಳು ಕದನದಿಂದ ಹಿಂದೆ ಸರಿಯುತ್ತವೆ. ಆದರೆ ಸಂತಾನೋತ್ಪತ್ತಿಯ ಋತುವಿನಲ್ಲಿ ಈ ಕದನಗಳು ಭೀಷಣರೂಪ ಪಡೆಯುವುದೂ ಇದೆ. ಈ ಋತುವಿನಲ್ಲಿ ಸಲಗಗಳು ತಮಗೆದುರಾಗುವ ಪ್ರತಿ ಗಂಡಾನೆಯೊಂದಿಗೂ ಕಾದಾಡುತ್ತವೆ ಮತ್ತು ಹೆಣ್ಣನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ಹೆಣ್ಣಾನೆಗಳ ಗುಂಪಿನ ಸುತ್ತಲೇ ಸುಳಿದಾಡುತ್ತಿರುತ್ತವೆ.

ತನ್ನ ಬಗ್ಗೆ ಅರಿವು

[ಬದಲಾಯಿಸಿ]

ಪ್ರಾಣಿಗಳ ಅಧ್ಯಯನದಲ್ಲಿ ಪ್ರಾಣಿಗಳಿಗೆ ತಮ್ಮ ಬಗ್ಗೆ ಇರುವ ಅರಿವನ್ನು ಅಳೆಯಲು ಕನ್ನಡಿ ಪ್ರಯೋಗ ನಡೆಸಲಾಗುವುದು. ಒಂದು ಆನೆಯ ಮೈಮೇಲೆ ಕನ್ನಡಿಯ ಮೂಲಕ ಮಾತ್ರ ನೋಡಬಹುದಾದ ಗುರುತುಗಳನ್ನು ಮೂಡಿಸಿ ಕನ್ನಡಿಯ ಮುಂದೆ ನಿಲ್ಲಿಸಲಾಯಿತು. ಅಚ್ಚರಿಯೆಂಬಂತೆ ಆನೆಯು ಈ ಗುರುತುಗಳನ್ನು ಕನ್ನಡಿಯಲ್ಲಿ ಕಂಡೊಡನೆ ಇವುಗಳನ್ನು ತನ್ನ ಮೈಮೇಲೆ ಇತರ ಅಂಗಗಳ ಮೂಲಕ ತಪಾಸಿಸಲಾರಂಭಿಸಿತು. ಇದರಿಂದಾಗಿ ಆನೆಯು ಕನ್ನಡಿಯಲ್ಲಿ ಕಂಡ ಬಿಂಬವು ತಾನೇ ಎಂದು ಗುರುತಿಸಕೊಳ್ಳಬಲ್ಲುದೆಂಬುದನ್ನು ಕಂಡುಕೊಳ್ಳಲಾಯಿತು.

ಪರಸ್ಪರ ಸಂಪರ್ಕ

[ಬದಲಾಯಿಸಿ]
ಇಂಗ್ಲೆಂಡಿನ ಮೃಗಾಲಯವೊಂದರಲ್ಲಿ ಆಪ್ಹ್ರಿಕಾದ ಸವಾನ್ನಾ ಆನೆಯೊಂದು ಏಷ್ಯಾದ ಆನೆಯೊಂದಿಗೆ.

ಕಡಿಮೆ ಆವರ್ತನದ ಶಬ್ದತರಂಗಗಳನ್ನು ನೆಲದ ಮಾರ್ಗವಾಗಿ ಕಳುಹಿಸುವ ಮತ್ತು ಗ್ರಹಿಸುವ ಮೂಲಕ ಆನೆಗಳು ಪರಸ್ಪರೊಂದಿಗೆ ಬಲು ದೂರದವರೆಗೆ ಸಂಪರ್ಕ ಸಾಧಿಸುವುವು. ಗಾಳಿಗಿಂತ ನೆಲದ ಮೂಲಕ ಶಬ್ದವು ಹೆಚ್ಚು ದೂರದವರೆಗೆ ಸಾಗಬಲ್ಲುದಾದ್ದರಿಂದ ಈ ವಿಧಾನವು ಆನೆಗಳಿಗೆ ಅತಿ ಸಹಕಾರಿಯಾಗಿದೆ. ಆನೆಯ ಸೂಕ್ಷ್ಮವಾದ ಪಾದಗಳು ಇಂತಹ ತರಂಗಗಳನ್ನು ತಪ್ಪದೆ ಗ್ರಹಿಸಬಲ್ಲವು. ಅತಿ ಏಕಾಗ್ರತೆಯಿಂದ ಕೇಳಿಸಿಕೊಳ್ಳುವ ಸಂದರ್ಭದಲ್ಲಿ ಗುಂಪಿನ ಪ್ರತಿ ಆನೆಯು ಮುಂಗಾಲುಗಳಲ್ಲಿ ಒಂದನ್ನು ಮೇಲಕ್ಕೆತ್ತಿ ಶಬ್ದ ಬಂದ ದಿಕ್ಕಿಗೆ ತಿರುಗುತ್ತದೆ ಅಥವಾ ಸೊಂಡಿಲನ್ನು ನೆಲಕ್ಕೆ ತಾಗಿಸಿಟ್ಟುಕೊಳ್ಳುತ್ತದೆ. ಒಂದು ಕಾಲನ್ನು ಮೇಲಕ್ಕೆತ್ತುವುದರಿಂದ ಉಳಿದ ಕಾಲುಗಳಿಗೆ ಗ್ರಹಣಶಕ್ತಿ ಹೆಚ್ಚುವುದೆಂದು ತಿಳಿಯಲಾಗಿದೆ. ಈ ದಿಸೆಯಲ್ಲಿ ಅಧ್ಯಯನಗಳು ಇನ್ನೂ ಸಾಗುತ್ತಿವೆ. ಒಂದು ಗಂಡಾನೆಯು ಬಲು ದೂರದಲ್ಲಿರುವ ತನಗೆ ಸಂಗಾತಿಯಾಗಬಹುದಾದ ಹೆಣ್ಣಾನೆಯ ಇರುವಿಕೆಯನ್ನು ಹೇಗೆ ಕಂಡುಕೊಳ್ಳುವುದೆಂಬುದು ವಿಜ್ಞಾನಿಗಳಿಗೆ ಇನ್ನೂ ಅರ್ಥವಾಗಿಲ್ಲ.

ಸಂತಾನೋತ್ಪತ್ತಿ , ಮರಿಗಳು ಮತ್ತು ಶಿಶುವಿನ ಪಾಲನೆ

[ಬದಲಾಯಿಸಿ]

ಸಂತಾನೋತ್ಪತ್ತಿ

[ಬದಲಾಯಿಸಿ]

ಹೆಣ್ಣಾನೆಯು ೯ ರಿಂದ ೧೨ನೆಯ ವಯಸ್ಸಿಗೆ ಲೈಂಗಿಕವಾಗಿ ಪ್ರೌಢಾವಸ್ಥೆಯನ್ನು ತಲುಪುವುದು. ಸುಮಾರು ೧೩ನೆಯ ಪ್ರಾಯದಲ್ಲಿ ಮೊದಲ ಬಾರಿಗೆ ಗರ್ಭವತಿಯಾಗುವುದು. ಹೆಣ್ಣಾನೆಯು ೫೫ ರಿಂದ ೬೦ನೆಯ ವಯಸ್ಸಿನವರೆಗೂ ಹೆರಬಲ್ಲುದು. ಪ್ರತಿ ಹೆರಿಗೆಯ ಮಧ್ಯೆ ಸುಮಾರು ೫ ವರ್ಷಗಳ ಅಂತರವಿರುತ್ತದೆ. ಆನೆಯ ಗರ್ಭಧಾರಣೆಯ ಅವಧಿ ಸುಮಾರು ೨೨ ತಿಂಗಳುಗಳು. ಇದು ಇತರ ಯಾವುದೇ ಪ್ರಾಣಿಗಿಂತ ಹೆಚ್ಚು. ಆನೆಯು ಒಂದು ಬಾರಿಗೆ ಒಂದು ಮರಿಗೆ ಮಾತ್ರ ಜನ್ಮವೀಯುವುದು. ಅವಳಿಗಳು ಬಲು ಅಪರೂಪ. ಹೆರಿಗೆಯ ಅವಧಿ ಸರಾಸರಿ ೧೧ ಗಂಟೆಗಳು. ನವಜಾತ ಮರಿಯು ಸುಮಾರು ೩ ಅಡಿ ಎತ್ತರವಿದ್ದು ೯೦ರಿಂದ ೧೧೫ ಕಿಲೋಗ್ರಾಂ ತೂಗುವುದು. ಮರಿಯ ತೂಕವು ದಿನಕ್ಕೆ ಒಂದು ಕಿಲೋಗ್ರಾಂನಷ್ಟು ಹೆಚ್ಚುವುದು. ಕಾಡಿನಲ್ಲಿ ಗರ್ಭವತಿ ಆನೆಯ ಮತ್ತು ನವಜಾತ ಶಿಶುವಿನ ರಕ್ಷಣೆಯನ್ನು ಉಳಿದ ಹೆಣ್ಣಾನೆಗಳು ಮಾಡುವುವು. ಶಿಶುವಿನ ಜನನವಾದ ತಕ್ಷಣದಿಂದಲೇ ಅದರ ಪಾಲನೆ ಮತ್ತು ಪೋಷಣೆ ಗುಂಪಿನ ಎಲ್ಲಾ ಹೆಣ್ಣಾನೆಗಳ ಜವಾಬ್ದಾರಿಯಾಗಿಬಿಡುವುದು.

ತಾಯ್ತನ ಮತ್ತು ಶಿಶುಪಾಲನೆ

[ಬದಲಾಯಿಸಿ]

ಜನಿಸಿದ ತಕ್ಷಣ ಶಿಶುವು ತನ್ನ ಸೊಂಡಿಲಿನಲ್ಲಿ ಶೇಖರವಾಗಿರುವ ದ್ರವವಸ್ತುಗಳನ್ನು ಹೊರದಬ್ಬಲು ಒಮ್ಮೆ ಸೀನುವುದು. ಇದೇ ಹೊರಪ್ರಪಂಚದಲ್ಲಿ ಮರಿಯ ಮೊದಲ ಕ್ರಿಯೆ. ತಾಯಿ ಆನೆಯು ಈ ಶಬ್ದ ಕೇಳಿದ ಕೂಡಲೇ ಅಚ್ಚರಿ ಹಾಗೂ ಸಂಭ್ರಮದಿಂದ ಪ್ರತಿಕ್ರಿಯೆ ನೀಡುವುದು. ಹುಟ್ಟಿದ ೩೦ ನಿಮಿಷಗಳ ಒಳಗೆ ಮರಿಯು ತನ್ನ ಕಾಲಮೇಲೆ ನಿಂತುಕೊಳ್ಳುವ ಯತ್ನ ಮಾಡುವುದು. ಸುಮಾರು ಒಂದು ಗಂಟೆಯ ಒಳಗೆ ತನ್ನ ತಾಯಿಯ ಸಹಾಯದಿಂದ ಇದರಲ್ಲಿ ಯಶಸ್ವಿಯೂ ಆಗುವುದು. ಕೆಲವೇ ದಿನಗಳಲ್ಲಿ ನಿಧಾನವಾಗಿ ನಡೆಯುತ್ತ ತನ್ನ ತಾಯಿಯನ್ನು ಹಿಂಬಾಲಿಸಲು ಶಕ್ತವಾಗುವುದು. ಮರಿಯು ತನ್ನ ತಾಯ ಹಾಲನ್ನು ಬಾಯಿಯ ಮೂಲಕವಾಗಿ ಹೀರುವುದು. ಸೊಂಡಿಲನ್ನು ಉಪಯೋಗಿಸುವುದಿಲ್ಲ. ಪ್ರತಿ ಬಾರಿ ಕೆಲವೇ ನಿಮಿಷಗಳವರೆಗೆ ಹಾಲನ್ನು ಹೀರುವ ಮರಿಯು ದಿನದಲ್ಲಿ ಹಲವು ಬಾರಿ ಈ ಕ್ರಿಯೆ ನಡೆಸುವುದು. ಮರಿಯಾನೆಯು ದಿನಕ್ಕೆ ಸುಮಾರು ೧೧ ಲೀಟರಿನಷ್ಟು ಹಾಲನ್ನು ಕುಡಿಯುವುದು. ಸುಮಾರು ಎರಡು ವರ್ಷಗಳವರೆಗೆ ಮರಿಯು ತಾಯಿ ಹಾಲನ್ನು ಕುಡಿಯುವುದು. ತಾಯಿಯಲ್ಲಿ ದೊರೆಯುವ ಹಾಲಿನ ಪ್ರಮಾಣ, ತಾಯಿಯ ಮನಸ್ಸು ಮತ್ತು ಇನ್ನೊಂದು ಶಿಶುವಿನ ಜನನ ಇವುಗಳ ಮೇಲೆ ಸ್ತನ್ಯಪಾನದ ಅವಧಿ ಅವಲಂಬಿಸಿದೆ. ಮರಿಯಾನೆಯು ಎಲ್ಲವನ್ನೂ ಇತರ ಆನೆಗಳನ್ನು ನೋಡುವ ಮೂಲಕ ಕಲಿಯುವುದು. ಸೊಂಡಿಲಿನ ಉಪಯೋಗ ಇದಕ್ಕೆ ಉದಾಹರಣೆ. ಮರಿಗೆ ತನ್ನ ಸೊಂಡಿಲಿನ ಮೇಲೆ ಪೂರ್ಣ ನಿಯಂತ್ರಣ ಸಾಧಿಸಲು ಹಲವು ತಿಂಗಳುಗಳು ಬೇಕಾಗುತ್ತವೆ. ಆರಂಭದಲ್ಲಿ ತನ್ನದೇ ಸೊಂಡಿಲನ್ನು ತೊಡರಿ ಎಡವಿ ಬೀಳುವುದು ಮಾಮೂಲು. ಅಲ್ಲದೆ ಮೊದಮೊದಲು ಮರಿಯು ತಲೆ ಅಲ್ಲಾಡಿಸಿದಾಗಲೆಲ್ಲಾ ಸೊಂಡಿಲು ಯಾವುದೇ ಹಿಡಿತವಿಲ್ಲದೆ ರಬ್ಬರಿನ ಕೊಳವೆಯಂತೆ ತೂಗಾಡುವುದು.

ಮರಿಯಾನೆಗಳು

[ಬದಲಾಯಿಸಿ]

ಹದಿಮೂರನೆಯ ವಯಸ್ಸಿಗೆ ಹೆಣ್ಣಾನೆಯು ಸಂತಾನೋತ್ಪತ್ತಿಯಲ್ಲಿ ತೊಡಗುವುದು. ಇದಕ್ಕಾಗಿ ಅದು ವಯಸ್ಕ, ದೊಡ್ಡದಾದ ಮತ್ತು ಬಲಿಷ್ಠ ಗಂಡಾನೆಯನ್ನು ಸಂಗಾತಿಯಾಗಿ ಆರಿಸಿಕೊಳ್ಳುವುದು. ಈ ವಿಧಾನದಿಂದಾಗಿ ಮರಿಯ ಉಳಿಯುವಿಕೆಯ ಸಾಧ್ಯತೆ ಹೆಚ್ಚುವುದು. ನವಜಾತ ಮರಿಯು ಕುಟುಂಬದ ಆಕರ್ಷಣೆಯ ಕೇಂದ್ರವಾಗುತ್ತದೆ. ಮರಿಯಾನೆಗಳೂ ಸೇರಿದಂತೆ ಗುಂಪಿನ ಎಲ್ಲಾ ಸದಸ್ಯರು ಹೊಸ ಮರಿಯನ್ನು ಸುತ್ತುವರಿದು ನಿಂತು ತಮ್ಮ ಸೊಂಡಿಲಿನಿಂದ ಮರಿಯನ್ನು ಮುಟ್ಟುವುದು ಹಾಗೂ ಸವರುವುದನ್ನು ಮಾಡುತ್ತವೆ. ಮರಿಗೆ ಜನಿಸಿದಾಗ ದೃಷ್ಟಿಯು ಬಹಳ ಕಡಿಮೆ ಇರುವುದರಿಂದ ತನ್ನ ಸುತ್ತಮುತ್ತಲನ್ನು ಅರಿಯಲು ಸೊಂಡಿಲನ್ನೇ ಬಳಸಬೇಕಾಗುವುದು.

ಹೆಚ್ಚುವರಿ ತಾಯಂದಿರು

[ಬದಲಾಯಿಸಿ]

ಮರಿಯ ಜನನದ ಸಂಭ್ರಮವು ಕೊಂಚ ಇಳಿದ ನಂತರ ತಾಯಾನೆಯು ತನ್ನ ಮರಿಯನ್ನು ನೋಡಿಕೊಳ್ಳಲು ಹಲವು ಸಹಾಯಕರನ್ನು ಆರಿಸಿಕೊಳ್ಳುವುದು. ಈ ಸಹಾಯಕ ಆನೆಗಳು ಪೂರ್ಣಾವಧಿ ಈ ಮರಿಯ ಪಾಲನೆ ಮತ್ತು ರಕ್ಷಣೆ ನಡೆಸುವುವು. ತಾಯಾನೆಗೆ ಮರಿಗೆ ಹಾಲೂಡಿಸುವ ಕೆಲಸವೊಂದನ್ನು ಮಾತ್ರ ವಹಿಸಿ ಮರಿಯನ್ನು ಬೆಳೆಸುವಲ್ಲಿ ಇತರ ಎಲ್ಲಾ ಜವಾಬ್ದಾರಿಯನ್ನು ಈ ಸಹಾಯಕ ಆನೆಗಳು ನಿರ್ವಹಿಸುತ್ತವೆ. ತನ್ನ ಮರಿಗೆ ಎಷ್ಟು ಹೆಚ್ಚಿನ ಸಂಖ್ಯೆಯ ಸಹಾಯಕರಿರುವರೋ ಅಷ್ಟರ ಮಟ್ಟಿಗೆ ತಾಯಿಗೆ ಬಿಡುವು ಹೆಚ್ಚಿಗೆ ದೊರೆತು ಉತ್ತಮ ಆಹಾರ ಹುಡುಕುವಲ್ಲಿ ನೆರವಾಗುವುದು. ಬೇರೆ ಮರಿಗಳ ತಾಯ್ತನವನ್ನು ನಿರ್ವಹಿಸುವ ಹೆಣ್ಣಾನೆಗಳಿಗೆ ಈ ವಿಷಯದಲ್ಲಿ ಗಾಢ ಅನುಭವ ದೊರೆತು ಮುಂದೆ ತಮ್ಮದೇ ಮರಿಗಳನ್ನು ಬೆಳೆಸುವಾಗ ನೆರವಿಗೆ ಬರುವುದು.

ಆನೆಗಳು ಮತ್ತು ಪರಿಸರ

[ಬದಲಾಯಿಸಿ]

ಆನೆಗಳು ಹಲವು ಬಾರಿ ಎಲೆಗಳನ್ನು ತಿನ್ನುವುದಕ್ಕೋಸ್ಕರ ಮರದ ರೆಂಬೆಗಳನ್ನು ಅಥವಾ ಇಡೀ ಮರವನ್ನೇ ಬೇರುಸಮೇತ ಕಿತ್ತೊಗೆಯುವುವು. ಇದರಿಂದಾಗಿ ಆ ಸ್ಥಳದಲ್ಲಿ ಹೊಸದಾಗಿ ಬೇರೆ ಗಿಡಮರಗಳು ಬೆಳೆಯಲು ಅನುವಾಗುವುದು. ಇದರಿಂದ ಆನೆಗೆ ಮತ್ತು ಇತರ ಜೀವಿಗಳಿಗೆ ಹೆಚ್ಚಿನ ಪೋಷಕಾಂಶವುಳ್ಳ ಆಹಾರ ದೊರೆಯುವ ಸಾಧ್ಯತೆ ಹೆಚ್ಚುವುದು. ಆನೆಗಳು ತಾವು ನಡೆದಾಡುವ ಹಾದಿಯಲ್ಲಿ ಗಿಡಮರಗಳನ್ನು ನಿವಾರಿಸಿ ಕಾಲುದಾರಿಯನ್ನು ನಿರ್ಮಿಸುವುವು. ಅರಣ್ಯದ ದುರ್ಗಮ ಪ್ರದೇಶಗಳಿಗೆ ತೆರಳಲು ಇತರ ಪ್ರಾಣಿಗಳು ಇಂತಹ ದಾರಿಯ ಉಪಯೋಗ ಪಡೆಯುವುವು. ಮಾನವನು ಕೂಡ ಇಂದು ಇಂತಹ ಅನೇಕ ಕಾಲುದಾರಿಗಳನ್ನು ಪೂರ್ಣಪ್ರಮಾಣದ ರಸ್ತೆಗಳನ್ನಾಗಿ ಮಾರ್ಪಡಿಸಿರುವನು. ಬೇಸಿಗೆಯಲ್ಲಿ ನೆಲದಾಳದಲ್ಲಿರುವ ನೀರಿನ ಸೆಲೆಗಳನ್ನು ಹುಡುಕಲು ಆನೆಗಳು ಒಣಗಿದ ಕೆರೆ ಕೊಳಗಳನ್ನು ಅಗೆದು ಹಾಕಿ ಹೊಸ ನೀರಿನಾಸರೆಯನ್ನು ಸೃಷ್ಟಿಸುತ್ತವೆ. ಇಂತಹ ನೀರಿನಾಸರೆ ಆ ಪ್ರದೇಶದ ಉಳಿದ ವನ್ಯಜೀವಿಗಳಿಗೆ ಏಕೈಕ ನೀರಿನ ತಾಣವಾಗಿರುತ್ತದೆ. ಆನೆಗಳನ್ನು ಇತರ ಹಲವು ಜೀವಿಗಳು ಅವಲಂಬಿಸಿರುತ್ತವೆ. ಉದಾಹರಣೆಗೆ ಗೆದ್ದಲು. ಗೆದ್ದಲು ಹುಳಗಳು ಆನೆಯ ಮಲವನ್ನು ಭಕ್ಷಿಸುವುದಲ್ಲದೆ ಈ ಮಲರಾಶಿಯ ಸುತ್ತ ತಮ್ಮ ಗೂಡು ನಿರ್ಮಿಸುತ್ತವೆ.

ಸಂತತಿಯ ಅಳಿವಿನ ಭಯ

[ಬದಲಾಯಿಸಿ]

ಬೇಟೆಯಾಡುವಿಕೆ

[ಬದಲಾಯಿಸಿ]

ಆನೆಗೆ ಸ್ವಾಭಾವಿಕ ಶತ್ರುಗಳು ಯಾರೂ ಇಲ್ಲವೆಂದೇ ಹೇಳಬಹುದು. ಅಪರೂಪಕ್ಕೊಮ್ಮೆ ಮರಿಯಾನೆಯೊಂದು ಮಾಂಸಾಹಾರಿ ಪ್ರಾಣಿಗಳಿಗೆ ಬಲಿಯಾಗಬಹುದಾದರೂ ವಯಸ್ಕ ಆನೆಯನ್ನು ಹುಲಿ, ಸಿಂಹಗಳಂತಹ ಬೇಟೆಗಾರ ಪ್ರಾಣಿಗಳು ಹಿಡಿಯುವ ಸಾಧ್ಯತೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಇಂತಹ ಪರಿಸ್ಥಿತಿಯಲ್ಲಿ ಆನೆಗಳ ಅತಿಮುಖ್ಯ ವೈರಿ ಮಾನವನೇ ಆಗಿದ್ದಾನೆ. ದಂತಕ್ಕಾಗಿ ಹೆಚ್ಚುತ್ತಿರುವ ಬೇಟೆ ಹಾಗೂ ಶೀಘ್ರವಾಗಿ ನಶಿಸುತ್ತಿರುವ ವಾಸಸ್ಥಳಗಳಿಂದಾಗಿ ಆನೆ ವಿನಾಶದ ಅಂಚಿನಲ್ಲಿದೆ. ನೈಸರ್ಗಿಕ ಕಾಡಿನ ನಾಶ, ಬಿದಿರಿನಂತಹ ಅರಣ್ಯ ಉತ್ಪನ್ನಗಳ ಅನಿಯಂತ್ರಿತ ಹಾಗೂ ಅವೈಜ್ಞಾನಿಕ ಸಂಗ್ರಹಣೆ, ಆಹಾರಕ್ಕಾಗಿ ಸ್ಪರ್ಧಿಸುವ ಜಾನುವಾರುಗಳ ಉಪಟಳ, ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅವುಗಳ ವಲಸೆಮಾರ್ಗಕ್ಕೆ ಅಡ್ಡಿ ಇತ್ಯಾದಿ ಕಾರಣಗಳಿಂದಾಗಿ ಆನೆಗಳ ಸಂಖ್ಯೆ ಇಳಿಮುಖವಾಗಿದೆ.

ನೆಲೆಯ ನಾಶ

[ಬದಲಾಯಿಸಿ]

ಎಂದಿನಿಂದಲೂ ಆನೆಯ ನೆಲೆಯಾಗಿದ್ದ ಪ್ರದೇಶಗಳಲ್ಲಿ ಇಂದು ಮಾನವನು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾನೆ. ಇದರಿಂದಾಗಿ ಆನೆ ಮತ್ತು ಮಾನವನ ನಡುವೆ ಸಂಘರ್ಷವೇರ್ಪಡುತ್ತಿದೆ. ತಮ್ಮ ಆಹಾರದ ಸಹಜ ನೆಲೆಯನ್ನು ಕಳೆದುಕೊಂಡ ಆನೆಗಳು ಇಂದು ಆಹಾರಕ್ಕಾಗಿ ಗದ್ದೆ ತೋಟಗಳಿಗೆ ನುಗ್ಗುತ್ತಿವೆ. ಇದನ್ನು ತಡೆಯಲು ಮಾನವನು ಆನೆಗಳನ್ನು ಕೊಲ್ಲಲಾರಂಭಿಸಿದ್ದಾನೆ. ಶ್ರೀಲಂಕಾದಲ್ಲಿ ಈ ಸಂಘರ್ಷಕ್ಕೆ ಪ್ರತಿ ವರ್ಷ ಸುಮಾರು ೧೫೦ ಆನೆಗಳು ಮತ್ತು ೧೦೦ ಮಾನವರು ಬಲಿಯಾಗುತ್ತಿದ್ದಾರೆಂದು ಅಂದಾಜು ಮಾಡಲಾಗಿದೆ. ತಮ್ಮ ಮೂಲ ನೆಲೆಯ ನಾಶವೇ ಏಷ್ಯಾದ ಆನೆಗಳ ಸಂಖ್ಯೆ ಕುಗ್ಗುತ್ತಿರುವುದಕ್ಕೆ ಮುಖ್ಯ ಕಾರಣವಾಗಿದೆ.

ಮಾನವ ಮತ್ತು ಆನೆ

[ಬದಲಾಯಿಸಿ]

ಆನೆಗಳ ಬೇಟೆ

[ಬದಲಾಯಿಸಿ]

ಆಫ್ರಿಕಾದ ದಂತಚೋರರು ಒಂದೇಸಮನೆ ಕೇವಲ ದೊಡ್ಡ ದಂತವುಳ್ಳ ಆನೆಗಳನ್ನು ಬೇಟೆಯಾಡಿದರು. ಇದರಿಂದ ಒಂದು ವಿಶಿಷ್ಟ ಪರಿಸ್ಥಿತಿಯುಂಟಾಗಿ ಹೆಣ್ಣಾನೆಗಳು ಸಂತಾನಕ್ಕಾಗಿ ಚಿಕ್ಕ ದಂತವುಳ್ಳ ಅಥವಾ ದಂತವೇ ಇಲ್ಲದ ಗಂಡಾನೆಗಳನ್ನು ಕೂಡಬೇಕಾಯಿತು. ಈ ಪ್ರಕ್ರಿಯೆ ದಶಕಗಳ ಕಾಲ ಮುಂದುವರಿದು ಆನೆಗಳ ವಂಶವಾಹಿಯಲ್ಲಿ ಅನೇಕ ಬದಲಾವಣೆಯನ್ನುಂಟುಮಾಡಿತು. ಇಂದು ಜನಿಸುವ ಆನೆಗಳಲ್ಲಿ ೩೦%ರಷ್ಟಕ್ಕೆ ದಂತಗಳು ಮೊಳೆಯುವುದೇ ಇಲ್ಲ. ಒಂದೊಮ್ಮೆ ತೀರಾ ಅಪರೂಪದ ವಿದ್ಯಮಾನವಾಗಿದ್ದ ಇದು ಇಂದು ಸಹಜಸಾಮಾನ್ಯವಾಗಿದೆ. ಆನೆಗಳು ತಮ್ಮ ದಂತಗಳನ್ನು ಹಲವು ಬಗೆಯಲ್ಲಿ ಉಪಯೋಗಕ್ಕೆ ತಂದುಕೊಳ್ಳುವುದರಿಂದ ದಂತವಿಹೀನ ಆನೆಗಳು ತಮ್ಮ ಸಹಜ ಜೀವನದ ವಿಧಾನವನ್ನು ಬಹಳವಾಗಿ ಬದಲಾಯಿಸಿಕೊಳ್ಳಬೇಕಾಗುವುದು. ಮುಂದೊಮ್ಮೆ ಆನೆಗಳ ಜೀವನಶೈಲಿ ಬಹುಶಃ ಸಂಪೂರ್ಣವಾಗಿ ಬೇರೆಯಾಗಿಬಿಡಬಹುದು.

ಪಳಗಿಸುವಿಕೆ

[ಬದಲಾಯಿಸಿ]

ಮಾನವು ಅನಾದಿಕಾಲದಿಂದಲೂ ಆನೆಗಳನ್ನು ಪಳಗಿಸಿ ಶ್ರಮದ ಕಾರ್ಯಗಳಿಗೆ ಉಪಯೋಗಿಸಿಕೊಂಡಿರುವನು. ಸಿಂಧೂ ಕಣಿವೆಯ ನಾಗರಿಕತೆಯು ಈ ಅಂಶಕ್ಕೆ ಪುಷ್ಟಿ ಕೊಡುತ್ತದೆ. ಆದರೆ ಎಂದೂ ಮಾನವನು ಆನೆಯನ್ನು ಪೂರ್ಣವಾಗಿ ಪಳಗಿಸಲಾಗಿಲ್ಲ. ಮದವೇರಿದ ಗಂಡಾನೆಯು ಮಾನವನ ನಿಯಂತ್ರಣಕ್ಕೆ ಮೀರಿದುದು. ಆದ್ದರಿಂದಲೇ ಸಾಮಾನ್ಯವಾಗಿ ಮಾನವನು ಹೆಣ್ಣಾನೆಗಳನ್ನು ಪಳಗಿಸಿಟ್ಟುಕೊಳ್ಳುವನು. ಯುದ್ಧದಲ್ಲಿ ಬಳಸುವ ಆನೆಗಳು ಇದಕ್ಕೆ ಒಂದು ಅಪವಾದ. ಸಾಮಾನ್ಯವಾಗಿ ನಾಡಿನಲ್ಲಿ ಪಳಗಿಸಿದ ಆನೆಗಳ ಸಂತಾನೋತ್ಪತ್ತಿ ಮಾಡುವುದಕ್ಕಿಂತ ಕಾಡಿನಿಂದ ಮರಿಯಾನೆಗಳನ್ನು ಹಿಡಿದುತಂದು ಪಳಗಿಸುವುದೇ ಸೂಕ್ತವೆಂಬ ಅಭಿಪ್ರಾಯವಿದೆ. ಆನೆಗಳನ್ನು ಮಾನವನು ಬಹು ಭಾರದ ವಸ್ತುಗಳನ್ನು ಎತ್ತಲು ಮತ್ತು ಸಾಗಿಸಲು ಬಳಸಿಕೊಳ್ಳುವನು. ಮರದ ದಿಮ್ಮಿಗಳ ಸಾಗಣೆ ಇದಕ್ಕೆ ಒಂದು ಉದಾಹರಣೆ. ಹೆಚ್ಚಿನ ಪಳಗಿಸಿದ ಆನೆಗಳು ಏಷ್ಯಾದ ಆನೆಗಳು. ಆಫ್ರಿಕಾದ ಆನೆಗಳು ಕೊಂಚ ಉಗ್ರಸ್ವಭಾವದವುಗಳಾದ್ದರಿಂದ ಅವುಗಳನ್ನು ಪಳಗಿಸುವುದು ಕಷ್ಟಸಾಧ್ಯ. ಈಚೆಗೆ ಈ ದಿಸೆಯಲ್ಲಿ ಕೆಲ ಪ್ರಯತ್ನಗಳು ನಡೆದಿವೆ.

ಸಂಸ್ಕೃತಿಯಲ್ಲಿ ಆನೆ

[ಬದಲಾಯಿಸಿ]
ಶ್ರೀಲಂಕಾದ ಕ್ಯಾಂಡಿಯಲ್ಲಿ ಎಸಲ ಪೆರಹರ ಉತ್ಸವ.
ಕೇರಳದ ತ್ರಿಸ್ಸೂರಿನ ಪೂರಮ್ ಉತ್ಸವ.

ಅನಾದಿಕಾಲದಿಂದಲೂ ಮಾನವನಿಗೆ ಆನೆಯು ಒಂದು ಪ್ರತಿಷ್ಠೆಯ ಸಂಕೇತವಾಗಿದೆ. ಅಂದಿನ ಭಾರತದ ಅರಸರ ಪಟ್ಟದಾನೆಯು ಸಮಾಜದಲ್ಲಿ ಅತಿ ಗೌರವಾನ್ವಿತ ಸ್ಥಾನವನ್ನು ಹೊಂದಿತ್ತು. ಸೈನ್ಯದ ಶಕ್ತಿಯು ಗಜಬಲವನ್ನು ಹೆಚ್ಚಾಗಿ ಅವಲಂಬಿಸಿತ್ತು. ಉಳಿದಂತೆ ಆನೆಯನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಬಳಸುವ ವಾಡಿಕೆ ಇಂದಿಗೂ ಇದೆ. ದಕ್ಷಿಣ ಭಾರತದ ಬಹಳಷ್ಟು ದೇವಸ್ಥಾನಗಳು ತಮ್ಮದೇ ಆನೆಯನ್ನು ಸಾಕಿಕೊಂಡಿವೆ. ಕೇರಳದ ತ್ರಿಸ್ಸೂರಿನ ಪೂರಮ್ ಉತ್ಸವ ಆನೆಗಳೇ ಕೇಂದ್ರವಾಗುಳ್ಳ ಒಂದು ಅತ್ಯಾಕರ್ಷಕವಾದ ಉತ್ಸವ.

ಆನೆಯ ಮದ

[ಬದಲಾಯಿಸಿ]

ವಯಸ್ಕ ಗಂಡಾನೆಗಳು ನಿಯತವಾಗಿ ಮದವೇರಿದ ಸ್ಥಿತಿಯನ್ನು ತಲುಪುತ್ತವೆ. ಇದಕ್ಕೆ ಮಸ್ತ್ ( ಹಿಂದಿ ಭಾಷೆಯ ಪದ)ಎಂದು ಹೆಸರು. ಇಂತಹ ಸಮಯದಲ್ಲಿ ಆನೆಯು ಅತ್ಯಂತ ಉನ್ಮತ್ತಾವಸ್ಥೆಯಲ್ಲಿದ್ದು ತೀವ್ರ ಆಕ್ರಮಣಕಾರಿ ಪ್ರವೃತ್ತಿ ತೋರುವುದು. ಅಲ್ಲದೆ ತಲೆಯ ಪಾರ್ಶ್ವಗಳಲ್ಲಿರುವ ಗ್ರಂಥಿಗಳಿಂದ ಒಂದು ವಿಶಿಷ್ಟ ದ್ರವ ಸ್ರವಿಸುತ್ತಿರುತ್ತದೆ. ಮದೋನ್ಮತ್ತ ಆನೆಯು ಅತಿ ಅಪಾಯಕಾರಿಯಾಗಿದ್ದು ಇದರ ನಿಯಂತ್ರಣ ಸಾಧ್ಯವಿಲ್ಲ. ಪಳಗಿಸಿದ ಆನೆಗಳಲ್ಲಿ ಮದವೇರುವ ಸೂಚನೆ ಕಂಡ ಕೂಡಲೇ ಇವುಗಳನ್ನು ಭದ್ರವಾಗಿ ಒಂದು ಮರಕ್ಕೆ ಕಟ್ಟಿಹಾಕಿ ಮದವಿಳಿಯುವವರೆಗೂ ಆಹಾರ ಮತ್ತು ನೀರನ್ನು ನೀಡಲಾಗುವುದಿಲ್ಲ. ಈ ಮದವೇರುವ ವಿದ್ಯಮಾನ ಸಾಮಾನ್ಯವಾಗಿ ತರುಣ ಗಂಡಾನೆಗಳಲ್ಲಿ ಕಾಣಿಸುವುದು.

ಹೆಚ್ಚಿನ ಓದಿಗೆ

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]


"https://kn.wikipedia.org/w/index.php?title=ಆನೆ&oldid=1249392" ಇಂದ ಪಡೆಯಲ್ಪಟ್ಟಿದೆ