Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಉಚ್ಚಲುಪುರುಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಚ್ಚಲುಪುರುಕು: ಮಕ್ಕಳು ಹಾಸಿಗೆಯಲ್ಲಿ ಮೂತ್ರವಿಸರ್ಜಿಸುವುದಕ್ಕೆ ಇನ್ನೊಂದು ಹೆಸರು (ಎನ್ಯೂರೆಸಿಸ್). ಮಗು ಎಲ್ಲೆಂದರಲ್ಲಿ ಮೂತ್ರ ಸುರಿಸದಂತೆ ತಡೆದಿಟ್ಟುಕೊಳ್ಳಬೇಕಾದ ವಯಸ್ಸು ದಾಟಿದಮೇಲೂ ತಡೆಯಲಾಗದೆ ತಾನೇತಾನಾಗಿ ಸುರಿದುಹೋಗುವ ತೊಂದರೆಗೆ ಹೀಗೆನ್ನುವುದುಂಟು. ಹೆತ್ತವರಿಗೆ ಇದು ಫಜೀತಿಯಾದರೆ ಅನುಭವಿಸುವ ಮಗುವಿಗೆ ಬಲು ಪೇಚಿನದು. ಸುಮಾರು ಮೂರು ವರ್ಷ ತುಂಬಿದ ಮೇಲಾದರೂ ಇದು ಹತೋಟಿಗೆ ಬರಬೇಕೆಂಬುದು ಕೆಲವರ ಅಭಿಪ್ರಾಯ. ಆದರೆ ಎಷ್ಟೋ ಮಕ್ಕಳು ನಾಲ್ಕಾರು ವರ್ಷಗಳ ತನಕ ಇದನ್ನು ತಡೆಯಲಾರವು. ಐದು ದಾಟಿದವರಲ್ಲಿ ಉಚ್ಚಲುಪುರುಕರ ಸಂಖ್ಯೆ ಸುಮಾರು ಶೇ.5. ನೆರೆವ ವಯಸ್ಸಿಗೆ ಬರಬರುತ್ತ ನಿಂತು ಹೋಗುವುದು. ಕೆಲವರಿಗೆ ಅಲ್ಲಿಗೂ ನಿಲ್ಲದು. ಹುಡುಗರಲ್ಲಿ ಹುಡುಗಿಯರ ಎರಡರಷ್ಟಿರುವುದು. ಒಂದು ಮಗು ಉಚ್ಚಲುಪುರುಕು ಆಗಲು ಕಾರಣಗಳನ್ನು ಅರಸಿ ಈ ಕೆಳಗಿನವನ್ನು ಸೂಚಿಸಲಾಗಿದೆ: ಅಂಗರಚನೆಯಲ್ಲಿ ದೋಷ ಅಥವಾ ರೋಗ: ಬೇಕೆಂದೇ ರೂಢಿಸಿಕೊಂಡ ದುರಭ್ಯಾಸ; ತರಬೇತು ಸಾಲದೆ ಅಥವಾ ಸರಿಯಾಗಿಲ್ಲದೆ ಎಳೆತನದ ಉಚ್ಚಲುಪುರುಕುತನ ಉಳಿದುಕೊಂಡಿರುವುದು; ನರಮಂಡಲ ಬೆಳೆಯದೇ ವಿಕಾಸ ಆಗದಿರುವುದು; ಮನೋವಿಕಾರ; ಎಚ್ಚರದ ಹೊತ್ತಿನಲ್ಲಿ ತಣಿಸಲಾಗದ ಆಸೆ ಭಾವನೆಗಳು ಮಗುವಿಗಿರುವುದು; ಅಂಗಸಂಗದ ಆಸೆ ಪುರೈಸುವ ಒಂದು ದಾರಿ; ಆಳದಲ್ಲಿ ಹುದುಗಿರುವ ಕಳವಳ, ದಿಗಿಲುಗಳ ಹೊರತೋರಿಕೆ, ಹೆತ್ತವರ ಮೇಲೆ ಹೊರಗಡೆ ತೋರಿಸಲಾಗದ ಅವಿತಿಟ್ಟ ಹಗೆತನ, ಇತ್ಯಾದಿ. ಉಚ್ಚಲುಪುರುಕಿನ ಚಿಕಿತ್ಸೆಯಲ್ಲೂ ಒಮ್ಮತವಿಲ್ಲ. ನಿರ್ದಿಷ್ಟ ವಿಧಾನವಿಲ್ಲ. ಹಲವಾರು ವಿಧಾನಗಳು, ಮದ್ದುಗಳು, ಕೈಸರಿಪಡಿಕೆಗಳಿಂದ (ಮ್ಯಾನಿಪ್ಯುಲೇಷನ್ಸ್‌) ಗುಣ ಕಂಡರೂ ಯಾವುದಾದರೂ ಒಂದು ಚಿಕಿತ್ಸೆಯಿಂದ ಎಲ್ಲರಿಗೂ ಪುರ್ತಿ ವಾಸಿ ಆದಂತಿಲ್ಲ. ರೋಗಿಯ ಮೈ, ಮನ, ಪರಿಸರಗಳನ್ನು ಚೆನ್ನಾಗಿ ತಿಳಿದು ಚಿಕಿತ್ಸೆ ಕೈಗೊಳ್ಳಬೇಕು. ಮನೋಭಾವಗಳಿಂದ ಉಚ್ಚಲುಪುರುಕಾಯಿತೋ ಇದರಿಂದ ಅದಾಯಿತೋ ಅಂತೂ ರೋಗಿಯನ್ನು ಬಲು ತಾಳ್ಮೆಯಿಂದ ಕಾಣಬೇಕು. ಸರಿಯಾದ ತರಬೇತನ್ನು ಕೊಡುವುದರಿಂದ ಈ ತೊಂದರೆಯನ್ನು ತಪ್ಪಿಸಬಹುದು. ಎರಡು ವರ್ಷಗಳಾದರೂ ತುಂಬುವ ತನಕ ತರಬೇತು ಕೊಡುವುದರಿಂದ ಏನೂ ಅನುಕೂಲವಾಗದು. ಉಚ್ಚಲುಪುರುಕನಾಗಿ ಇರುವುದರಿಂದ ಒಳಗಿನ ಹಿಂಜರಿಕೆ (ಇನ್ಹಿಬಿಷನ್ಸ್‌) ಹುಟ್ಟಿಕೊಳ್ಳಲು ಆಸ್ಪದವಾಗುತ್ತದೆ. ರಾತ್ರಿ ಹೊತ್ತು ಆಗಾಗ್ಗೆ ಮೂತ್ರ ಸುರಿಸಲೆಂದು ಏಳಿಸಿ ಹೊರಕ್ಕೆ ಕರೆದುಕೊಂಡು ಹೋಗಿ ಬರುವುದರಿಂದ ತನ್ನ ಬಟ್ಟೆಬರೆ ನೆನೆಸಿಕೊಳ್ಳದಿರುವುದು ಅನುಕೂಲವೇ ಆದರೂ ನಿದ್ರೆಯಲ್ಲೇ ಮೂತ್ರ ಸುರಿಸುವ ಅಭ್ಯಾಸ ಹತ್ತಿಬಿಡುವುದು. (ಎಂ.ಎಸ್.ಎನ್.)