Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಛಾಂದೋಗ್ಯೋಪನಿಷತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಛಾಂದೋಗ್ಯೋಪನಿಷತ್ ಸಾಮವೇದದ ಛಾಂದೋಗ್ಯ ಭ್ರಾಹ್ಮಣಕ್ಕೆ ಸೇರಿದೆ. ಸಾಮವೇದಿಗಳಾದ ಛಂದೋಗರ (ವೇದಗಾಯಕರ)ಉಪನಿಷತ್ತು ಇದಾದುದರಿಂದ ಈ ಹೆಸರು ಬಂದಿದೆ.ಇದು ವಿಸ್ತಾರವಾದ ಉಪನಿಷತ್ತು.

ಮುಖ್ಯವಾಗಿ ಎಂಟು ಅಧ್ಯಾಯಗಳಿಂದ ಕೂಡಿರುವ ಈ ಉಪನಿಷತ್ತಿನಲ್ಲಿ ಸಾಕಷ್ಟು ಕಥೆಗಳು,ಉಪಕಥೆಗಳು ಇವೆ. ಇದರಲ್ಲಿ ಆಧ್ಯಾತ್ಮದ ಜ್ಞಾನ ಭಂಡಾರವೇ ಅಡಗಿದೆ ಎಂಬ ಅಭಿಪ್ರಾಯ ಇದೆ."ಇರುವುದೆಲವೂ ಬ್ರ್ಹಹ್ಮ-ಎಲ್ಲವೂ ಬ್ರಹ್ಮದಿಂದಲೇ ಹುಟ್ಟಿದ್ದು,ಅದರಿಂದಲೇ ಬಾಳುತ್ತಿದ್ದು ಅದಕ್ಕೇ ಹಿಂತಿರುಗಿ ಹೋಗುತ್ತದೆ.ಅದನ್ನು ಸಮತ್ವ ಮನಸ್ಸಿನಿಂದ ಪೂಜಿಸಿ" ಇದು ಛಾಂದೋಗ್ಯ ಉಪನಿಷತ್ತಿನ ಉಪದೇಶ.

ಇದು ಅತ್ಯಂತ ಪ್ರಾಚೀನವಾದುದೆಂದು ಎಲ್ಲರೂ ಒಪ್ಪುತ್ತಾರೆ. ಸಾಮವೇದಕ್ಕೆ ಸೇರಿದ್ದು ಪ್ರಾಚೀನತೆ, ಅರ್ಥಗಾಂಭೀರ್ಯ, ಬ್ರಹ್ಮಜ್ಞಾನ ಪ್ರತಿಪಾದನೆ-ಈ ದೃಷ್ಟಿಗಳಿಂದ ಇದು ಬಹಳ ಪ್ರೌಢವೂ ಪ್ರಮೇಯ ಬಹುಲವೂ ಆಗಿದೆ.

ಎಂಟು ಅಧ್ಯಾಯಗಳೂ (ಪ್ರಪಾಠಕಗಳು) ಒಂದೊಂದರಲ್ಲೂ ಅನೇಕಾನೇಕ ಖಂಡಗಳೂ ಇವೆ. ಒಂದೊಂದು ಖಂಡದಲ್ಲೂ ಹಲವಾರು ಗದ್ಯ ಮಂತ್ರಗಳಿವೆ. ಈ ಖಂಡಗಳು ಬೇರೆ ಬೇರೆ ವಿಚಾರಗಳನ್ನು ವಿವೇಚಿಸುವುದರಿಂದ ಇವು ಬೇರೆ ಬೇರೆ ಕಾಲಕ್ಕೆ ಸೇರಿರಬಹುದೆಂದು ವಿಮರ್ಶಕರು ಭಾವಿಸುತ್ತಾರೆ. ಗೃಹಸ್ಥಜೀವನ ಬ್ರಹ್ಮಲೋಕ ಪ್ರಾಪ್ತಿಗೆ ವಿಹಿತಮಾರ್ಗವೆಂದು ಕೊನೆಯ ಖಂಡದಲ್ಲಿ ಹೇಳಿರುವುದರಿಂದ ಯಾಗಾದಿಗಳ ಪ್ರಾಧಾನ್ಯ ತಪ್ಪುವುದಕ್ಕೆ ಮುಂಚೆಯೇ ಇದು ಸಂಕುಲಿತವಾಗಿರಬೇಕೆಂದು ನಿರ್ಣಯಿಸಬಹುದು. ಪಶುಹಿಂಸೆಯೂ ಅನುಮೋದಿತವಾಗಿದೆ. ಆಚಾರ್ಯ ಪರಂಪರೆಯನ್ನೂ ಸಂಗ್ರಹವಾಗಿ ಕೊಡಲಾಗಿದೆ.

ಈ ಉಪನಿಷತ್ತಿನಲ್ಲಿ ತಿಳಿದುಬರುವ ಅಂಶಗಳು ಹೀಗಿವೆ: ಋಗ್ವೇದ ಸಾಮವೇದಗಳನ್ನು ಇನ್ನೂ ಅಧ್ಯಯನ ಮಾಡುತ್ತಿದ್ದರು; ಸಾಮದ ಸ್ವರವನ್ನೂ ಋಷಿದೇವತೆಗಳನ್ನೂ ನಿರ್ಧರಿಸಲಾಗಿತ್ತು; ಸಾಮಗಾನದೊಂದಿಗೆ ವೀಣಾಗಾನವೂ ಇತ್ತು; ಮಾಂಸಭಕ್ಷಣವನ್ನು ನಿಷೇಧಿಸಲಾಗಿತ್ತು; ಗೋತ್ರ ಪದ್ಧತಿ ದೃಢವಾಗಿತ್ತು; ವ್ಯಾಕರಣದ ಅಧ್ಯಯನವನ್ನೂ ಇತರ ವಿದ್ಯೆಗಳ ಅಧ್ಯಯನವನ್ನೂ ಗುರುವಿನ ಆವಶ್ಯಕತೆಯನ್ನೂ ಸ್ಪಷ್ಟಪಡಿಸಲಾಗಿತ್ತು. ದೇವಕೀಪುತ್ರನಾದ ಕೃಷ್ಣನಿಗೆ ಘೋರ ಅಂಗೀರಸ ಅಧ್ಯಾತ್ಮವಿದ್ಯೆಯನ್ನು ಉಪದೇಶಿಸಿದನೆಂದು 3ನೆಯ ಅಧ್ಯಾಯದಲ್ಲಿ ಹೇಳಲಾಗಿದೆ.

ಎಂಟು ಅಧ್ಯಾಯಗಳು

[ಬದಲಾಯಿಸಿ]

ಮೊದಲ ಅಧ್ಯಾಯದಲ್ಲಿ ಪ್ರಣವ ಸ್ವರೂಪವನ್ನೂ ಸಾಮಗಾನದ ಗೂಢ ಸ್ವರೂಪವನ್ನೂ ಮಾರ್ಮಿಕವಾಗಿ ತಿಳಿಸಲಾಗಿದೆ. ಉದ್ಗೀಥ ವಿದ್ಯೆಯ ಮಹತ್ತ್ವದ ನಿರೂಪಣೆಯೊಂದಿಗೆ ಉದ್ಗೀಥ, ಪ್ರಣವಗಳ ತಾದಾತ್ಮ್ಯವನ್ನು ಹೇಳಲಾಗಿದೆ. ಎರಡನೆಯ ಅಧ್ಯಾಯದಲ್ಲಿ ವಿಶ್ವವೇ ಸಾಮವೆಂದು ಸಾರಿ ಪಂಚವಿಧ ಸಪ್ತವಿಧ ಸಾಮೋಪಾಸನೆಯನ್ನು ಬೋಧಿಸಲಾಗಿದೆ.

3ನೆಯ ಅಧ್ಯಾಯದಲ್ಲಿ ಮಧುವಿದ್ಯೆಯ ನಿರೂಪಣೆಯೊಂದಿಗೆ ಆದಿತ್ಯನೇ ದೇವಮಧು, ಅವನೇ ಆತ್ಮ ಎಂದು ಸಾರಲಾಗಿದೆ. ಶಾಂಡಿಲ್ಯ ವಿದ್ಯೆ ಉಪವರ್ಣಿತವಾಗಿದೆ.

4ನೆಯ ಅಧ್ಯಾಯದಲ್ಲಿ ರೈಕ್ವನೆಂಬ ಬ್ರಹ್ಮಜ್ಞನಿಂದ ಜಾನು ಶ್ರುತಿ ಪೌತ್ರಾಯಣ ರಾಜಬ್ರಹ್ಮೋಪದೇಶವನ್ನು ಪಡೆದ ಕಥಾನಿರೂಪಣೆ ಇದೆ. ಸಂವರ್ಗ ವಿದ್ಯೆ ಮತ್ತು ಉಪಕೋಸಲ ವಿದ್ಯೆಗಳ ಉಪದೇಶ, ಸತ್ಯಕಾಮ ಜಾಬಾಲನ ವೃತ್ತಾಂತ, ದೇವಯಾನದ ಮುಖಾಂತರ ಆತ್ಮ ಬ್ರಹ್ಮಲೋಕವನ್ನು ಸೇರುವ ಕ್ರಮದ ವರ್ಣನೆಗಳು ಬಂದಿವೆ.

5ನೆಯ ಅಧ್ಯಾಯದಲ್ಲಿ ಇಂದ್ರಿಯಗಳಲ್ಲೆಲ್ಲ ಪ್ರಾಣವೇ ಶ್ರೇಷ್ಠವೆಂದು ತಿಳಿಸಲಾಗಿದೆ. ಜೈವಲಿಯಲ್ಲಿ ಪಂಚಾಗ್ನಿ ವಿದ್ಯೆಯ ಉಪದೇಶವಿದೆ. ಐದು ಜನ ಜಿಜ್ಞಾಸುಗಳು ಕೇಕಯ ಅಶ್ವಪತಿಯಿಂದ ವೈಶ್ವಾನರವಿದ್ಯೆಯ ಉಪದೇಶವನ್ನು ಪಡೆದ ಸಂವಾದವಿದೆ.

6ನೆಯ ಅಧ್ಯಾಯದಲ್ಲಿ ಉದ್ದಾಲಕ ಆರುಣಿ ಮಗನಾದ ಶ್ವೇತಕೇತುವಿಗೆ ಆತ್ಮವಿದ್ಯೆಯನ್ನು ಬೋಧಿಸಿದ ಸುಂದರವಾದ ಸಂವಾದವಿದೆ. ವಿಶ್ವವಿಖ್ಯಾತವಾದ ತತ್ತ್ವಮಸಿ ಮಂತ್ರದ ಉಪದೇಶ ಇದರಲ್ಲಿಯೇ ಬರುತ್ತದೆ.

7ನೆಯ ಅಧ್ಯಾಯದಲ್ಲಿ ನಾರದನಿಗೆ ಸನತ್ಕುಮಾರ ಮಾಡಿದ ಆತ್ಮವಿದ್ಯೋಪದೇಶವಿದೆ.

8ನೆಯ ಅಧ್ಯಾಯದಲ್ಲಿ ದಹರ ವಿದ್ಯೆಯ ಉಪದೇಶವೂ ಪ್ರಜಾಪತಿಯಿಂದ ಇಂದ್ರ ಆತ್ಮೋಪದೇಶವನ್ನು ಪಡೆದ ವೃತ್ತಾಂತವೂ ಇದೆ. ಇದು ಈ ಉಪನಿಷತ್ತಿಗೆ ಶಿಖರಪ್ರಾಯವಾಗಿದೆ.

೧.ಹಿಂದೂ ಧರ್ಮದ ಪರಿಚಯ:ಎ.ಕೆ.ಶಂಕರನಾರಾಯಣ ಭಟ್

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: