Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಜಾಸ್ಪರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೊಮೇನಿಯಾ ಬೆಟ್ಟದಲ್ಲಿನ ಜಾಸ್ಪರ್

ಜಾಸ್ಪರ್ - ಬೆಣಚಿನ ಒಂದು ವಿಧ.

ಅಪಾರದರ್ಶಕ ಗಟ್ಟಿ ಹಾಗೂ ಬಿಧುರವಾಗಿರುವುದರಿಂದ ಇದನ್ನು ಉಜ್ಜಿ ಸುಲಭವಾಗಿ ನಯಗೊಳಿಸಬಹುದು. ಇದು ಸಾಮಾನ್ಯವಾಗಿ ರಕ್ತ ಅಥವಾ ಉಜ್ವಲ ಕೆಂಪು ಬಣ್ಣದ್ದು. ಆದರೆ ಕೆಲವು ವೇಳೆ ಉಜ್ವಲ ಕಂದು, ಹಳದಿ, ಹಸುರು, ನೀಲಿ ಅಥವಾ ಕಪ್ಪು ಬಣ್ಣ ಇರುವುದೂ ಉಂಟು. ಹಿಂದೆ ಪಾರದೀಪಕ ಬೆಣಚುಗಳನ್ನೂ ಜಾಸ್ಪರ್ ಎಂದು ಕರೆಯುತ್ತಿದ್ದರು. ಆದರೆ ಇಂದು ಅಪಾರಕವಾದದ್ದಕ್ಕೆ ಮಾತ್ರ ಈ ಹೆಸರು ಸೀಮಿತವಾಗಿದೆ. ಜಾಲ್ಸಿಡೋನಿ, ಸೂಕ್ಷ್ಮ ಬೆಣಚುಕಣಗಳು ಮತ್ತು ಓಪಾಲ್ ಬೆಣಚುಗಳ ಮಿಶ್ರಣವೇ ಜಾಸ್ಪರ್. ಹಿಮಟೈಟ್ ಅಥವಾ ಲೈಮೊನೈಟ್ ಇದರಲ್ಲಿ ಪ್ರಮುಖ ವರ್ಣಜನ್ಯ ವಸ್ತು.

ವಿಧಗಳು

[ಬದಲಾಯಿಸಿ]

ವಿವಿಧ ವರ್ಣಗಳ ಪಟ್ಟೆಗಳಿರುವ ವಿಧಕ್ಕೆ ರಿಬಂಡ್ ಜಾಸ್ಪರ್ ಎಂದು ಹೆಸರು. ಸೈಬೀರಿಯದ ರಿಬಂಡ್ ಜಾಸ್ಪರಿನಲ್ಲಿ ಉಜ್ಜ್ವಲ ಕೆಂಪು ಮತ್ತು ಹಸುರು ಪಟ್ಟೆಗಳಿರುವುವು. ಲೀಬ್ಯ ಮರುಭೂಮಿ ಮತ್ತು ನೈಲ್ ಕಣಿವೆಗಳಲ್ಲಿ ವಿವಿಧ ಛಾಯೆಯ ಕಂದುವಲಯಗಳಿಂದ ಕೂಡಿದ ಜಾಸ್ಪರ್ ಉಂಡೆ ರೂಪದಲ್ಲಿ ದೊರೆಯುತ್ತವೆ. ಇದಕ್ಕೆ ಈಜಿಪ್ಟ್ ಜಾಸ್ಪರ್ ಎಂದು ಹೆಸರು. ಅಗೇಟ್ ಜಾಸ್ಪರ್ ಎಂಬುದು ನಿಜವಾದ ಜಾಸ್ಪರ್ ಮತ್ತು ಜಾಲ್ಸಿಡೋನಿಗಳ ಮಧ್ಯಾವಸ್ಥೆಯದು. ನಯವಾದ ಕಪ್ಪು ವರ್ಗದ ಫ್ಲಿಂಟ್ ಮಾದರಿ ಜಾಸ್ಪರಿಗೆ ಬೇಸನೈಟ್ ಅಥವಾ ಲಿಡಿಯನ್ ಕಲ್ಲು ಎಂದು ಹೆಸರು. ಇದನ್ನು ಚಿನ್ನ, ಬೆಳ್ಳಿ ಮುಂತಾದವನ್ನು ಪರೀಕ್ಷಿಸುವ ಒರೆಗಲ್ಲುಗಳಾಗಿ ಉಪಯೋಗಿಸುತ್ತಾರೆ. ಲ್ಯಾಪಿಸ್ ಲೆಜುಲಿಗೆ ಪ್ರತಿಯಾಗಿ ಕೃತಕ ವರ್ಣ ಪಟ್ಟಿ ಶಿಲೆಗಳನ್ನು ತಯಾರಿಸುವರು.

ಜಾಸ್ಪರ್ ಒಂದು ಸಾಧರಣ ರತ್ನ ಖನಿಜ. ಇದನ್ನು ಅಲಂಕಾರ ಖನಿಜವಾಗಿಯೂ ಉಪಯೋಗಿಸಬಹುದು. ಉಜ್ಜ್ವಲ ಹಸುರು, ಕೆಂಪು ಮತ್ತು ಹಳದಿ ವರ್ಣದವನ್ನು ಮುದ್ರೆ ಮತ್ತು ಮುದ್ರೆಯುಂಗುರ ತಯಾರಿಕೆಗೆ ಉಪಯೋಗಿಸಲಾಗುತ್ತಿತ್ತು.

ಸಿಗುವ ಸ್ಥಳಗಳು

[ಬದಲಾಯಿಸಿ]

ಜಾಸ್ಪರ್ ಸಿರಗಳ ರೂಪದಲ್ಲೂ ಜ್ವಾಲಾಮುಖಿಜ ಶಿಲಿಗಳಲ್ಲಿ ಖನಿಜಗ್ರಂಥಿಗಳ ರೂಪದಲ್ಲೂ ದೊರೆಯುತ್ತದೆ. ಭಾರತ, ದಕ್ಷಿಣ ಆಫ್ರಿಕ ಮತ್ತು ಬ್ರಜಿಲ್‍ಗಳಲ್ಲಿ ಇದು ಮುದ್ದೆಮುದ್ದೆಯಾಗಿಯೂ ಸಿಕ್ಕುವುದು.

ಜಾಸ್ಪರ್ ಧಾರವಾಡ ಶಿಲಾಸ್ತೋಮ ಮತ್ತು ಬೆಜವಾಡ ಶಿಲಾಶ್ರೇಣಿಗಳಲ್ಲಿ ಹೇರಳವಾಗಿ ದೊರೆಯುತ್ತದೆ. ಇವುಗಳಲ್ಲೆಲ್ಲ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕು ತಿಮ್ಮಪ್ಪಘರ್ ಹತ್ತಿರದ ಕಡಿದು ಪ್ರದೇಶದಲ್ಲಿರುವ ಸುಮಾರು 91-121.33 ಮೀ ದಪ್ಪದ ಜಾಸ್ಪರ್ ಶಿಲೆ ಉಲ್ಲೇಖಾರ್ಹ. ಕೆಂಪು, ಊದಾ ಮಿಶ್ರ ಬೂದು ಅಥವಾ ಬೂದು ಮಿಶ್ರ ಕಂದು ವರ್ಣಗಳ ಪಟ್ಟೆಗಳು ಇದರಲ್ಲಿವೆ. ಪರಸ್ಪರ ಲಂಬವಾಗಿರುವ ಮೂರು ಸೀಳು ತಂಡಗಳು ಇದರಲ್ಲಿರುವುದರಿಂದ ಇದು ಘನ ತುಂಡುಗಳಾಗಿ ವಿಭಜಿಸಿದೆ. ಆದ್ದರಿಂದ ಈ ತುಂಡುಗಳನ್ನು ಹೊರತೆಗೆಯುವುದೂ ಸುಲಭ. ಇವು ಒಂದು ಘನ ಗಜಗಳ ವರೆಗೆ ಗಾತ್ರದಲ್ಲಿ ವ್ಯತ್ಯಾಸವಿರುವುವು. ರಾಬರ್ಟ್ ಬ್ರೂಸ್‍ಫುಟ್ ಎಂಬಾತ ಇವನ್ನು ಅತ್ಯಂತ ವರ್ಣರಂಜಿತ ಸುಂದರಶಿಲೆಗಳೆಂದು ವರ್ಣಿಸಿದ್ದಾನೆ. ಪೂರ್ವಕೇಂಬ್ರಿಯನ್ ಕಾಲದ ಕಡಪಶಿಲಾಸ್ತೋಮಗಳು ಮತ್ತು ಬೆಳಗಾಂವಿ ಜಿಲ್ಲೆಯಲ್ಲಿರುವ ಕಲಾದಗಿ ಶಿಲಾಶ್ರೇಣಿಗಳ ಗುಂಡು ಶಿಲೆಗಳಲ್ಲಿ ಜಾಸ್ಪರ್ ಗುಂಡುಗಳಿವೆ.

ಚಿತ್ರಸಂಪುಟ

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಾಸ್ಪರ್&oldid=1073689" ಇಂದ ಪಡೆಯಲ್ಪಟ್ಟಿದೆ