Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಜೂಸೆಪ್ಪೆ ಗಾರಿಬಾಲ್ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೮೬೧ರಲ್ಲಿ ಗಾರಿಬಾಲ್ಡಿ

ಜೂಸೆಪ್ಪೆ ಗಾರಿಬಾಲ್ಡಿ (1807-1882) ಇಟಲಿಯ ರಾಷ್ಟ್ರಪ್ರೇಮಿ, ಹೋರಾಟಗಾರ, ಗಣರಾಜ್ಯವಾದಿ, ನಾಡಿನ ಏಕೀಕರಣವನ್ನು ಸಾಧಿಸಲು ಬಹು ಮಟ್ಟಿಗೆ ಕಾರಣರಾದವರಲ್ಲೊಬ್ಬ.

ಆರಂಭಿಕ ಜೀವನ

[ಬದಲಾಯಿಸಿ]

ಜನನ 1807ರ ಜುಲೈ 4ರಂದು ಫ್ರಾನ್ಸಿನ ನೀಸ್ ನಗರದಲ್ಲಿ. 1815-1860ರಲ್ಲಿ ಇದು ಸಾರ್ದೆನ್ಯಾ-ಪೈಮಾಂತೆ ರಾಜ್ಯಕ್ಕೆ ಒಳಪಟ್ಟಿತ್ತು.[][] ಮಗ ಪಾದ್ರಿಯಾಗಬೇಕೆಂಬುದು ತಂದೆತಾಯಿಯರ ಅಭಿಲಾಷೆಯಾಗಿತ್ತು. ಆದರೆ ಅವನನ್ನು ಕಡಲು ಆಕರ್ಷಿಸಿತು. ಅವನು ವ್ಯಾಪಾರ ಹಡಗೊಂದರಲ್ಲಿ ಬಹುಕಾಲ ನಾವಿಕನಾಗಿದ್ದ. ಇಟಲಿಯ ಕ್ರಾಂತಿ ನಾಯಕ ಜೂಸೆಪ್ಪೆ ಮಾಟ್ಸೀನಿಯ ಪ್ರಭಾವಕ್ಕೊಳಗಾಗಿ ಅವನ ಯುವ ಇಟಲಿ ಸಂಘದ ಸದಸ್ಯನಾದ.

ದಕ್ಷಿಣ ಅಮೇರಿಕಾ

[ಬದಲಾಯಿಸಿ]

ಪೈಮಾಂತೆಯಲ್ಲಿ ಜನರ ಬಂಡಾಯವನ್ನೇಬ್ಬಿಸುವ ಸಂಚೊಂದರಲ್ಲಿ (1834) ಭಾಗವಹಿಸಿದ್ದನೆಂಬುದು ಬಯಲಾದಾಗ ಅವನು ತಪ್ಪಿಸಿಕೊಂಡು ಓಡಿ ಹೋಗಿ ದಕ್ಷಿಣ ಅಮೆರಿಕ ತಲಪಿ, ಅಲ್ಲಿ 1836 ರಿಂದ 1848ರವರೆಗೆ ಅಲೆದಾಡಿದ. ಅವನ ಗೈರುಹಾಜರಿಯಲ್ಲಿ ಅವನ ಮೇಲೆ ಮರಣದಂಡನೆಯ ಶಿಕ್ಷೆ ಹೊರಿಸಲಾಯಿತು.

ದಕ್ಷಿಣ ಅಮೆರಿಕದಲ್ಲೂ ಅವನು ಸುಮ್ಮನಿರಲಿಲ್ಲ; ಬ್ರೆಜಿಲ್ ವಿರುದ್ಧ ಬಂಡೆದ್ದಿದ್ದ ರೀಯೂಗ್ರಾಂಡೆ ದೂ ಸೂಲ್ ಪರವಾಗಿ ಕಡಲುಗಳ್ಳನಾಗಿ ಕಾರ್ಯಾಚರಣೆ ನಡೆಸಿದ. ಅರ್ಜೆಂಟೀನದ ವಿರುದ್ಧ ಉರುಗ್ವೆಯ ಪರವಾಗಿ ಹೋರಾಡಿದ. ಇವನ ನೆರವಿನಿಂದ 1843ರಲ್ಲಿ ಇಟಾಲಿಯನ್ ಸೈನ್ಯದಳವೊಂದನ್ನು (ಕೆಂಪಂಗಿಗಳು) ನಿರ್ಮಿಸಲಾಯಿತು. ಗೆರಿಲಾ ಯುದ್ಧಕಾರ್ಯಾಚರಣೆಯಲ್ಲಿ ಗಾರಿಬಾಲ್ಡಿ ವಿಶೇಷಾನುಭವವನ್ನು ಸಂಪಾದಿಸಿದ್ದು ಈ ದಳದೊಂದಿಗೆ ಇದ್ದಾಗ.[] 1839ರಲ್ಲಿ ಅವನು ಆನ ಮೇರಿಯ ರಿಬೇರೊದ ಸಿಲ್ವ ಎಂಬವಳನ್ನು ಎತ್ತಿಕೊಂಡು ಹೋಗಿ, ಆಕೆಯ ಮೊದಲ ಗಂಡ ತೀರಿಕೊಂಡ ಮೇಲೆ ಮದುವೆಯಾದ (1842).[] ಗಾರಿಬಾಲ್ಡಿಯ ಹೋರಾಟಗಳಲ್ಲಿ ಅವಳೂ ಅವನೊಡನೆ ಇರುತ್ತಿದ್ದಳು. ಆಕೆ 1849ರಲ್ಲಿ ತೀರಿಕೊಂಡಳು.

ಇಟಲಿಗೆ ಹಿಂದಿರುಗಿದ್ದು

[ಬದಲಾಯಿಸಿ]

ಇಟಲಿಯಲ್ಲಿ ಕ್ರಾಂತಿ ಪರಿಸ್ಥಿತಿ ಏರ್ಪಟ್ಟಿದೆಯೆಂಬ ಸುದ್ದಿ ಕೇಳಿ ಗಾರಿಬಾಲ್ಡಿ ತನ್ನ ಕೆಲವು ಅನುಯಾಯಿಗಳೊಂದಿಗೆ 1848ರಲ್ಲಿ ತನ್ನ ನಾಡಿಗೆ ಹಿಂದಿರುಗಿದ. ಇಟಲಿಯ ಎಲ್ಲ ರಾಜ್ಯಗಳಲ್ಲೂ ಬಂಡಾಯ ಸ್ಥಿತಿಯಿತ್ತು. ಸಾರ್ದೆನ್ಯಾ ಆಸ್ಟ್ರಿಯಗಳ ನಡುವೆ ಯುದ್ಧ ಆರಂಭವಾಗಿತ್ತು. ಗಾರಿಬಾಲ್ಡಿ ಗಣತಂತ್ರವಾದಿಯಾಗಿದ್ದರೂ ಸಾರ್ದೆನ್ಯಾದ ದೊರೆಗೆ ನೆರವು ನೀಡಲು ಮುಂದೆ ಬಂದ. ಆದರೆ ದೊರೆ ಇದರಲ್ಲಿ ಉತ್ಸಾಹ ತೋರಲಿಲ್ಲ. ಆದ್ದರಿಂದ ಅವನು ಮಿಲಾನಿನ ನೆರವಿಗೆ ಹೋದ. ಸಾರ್ದೆನ್ಯ ಮಿಲಾನ್‌ಗಳು ಸೋತವು. ಮಿಲಾನ್ ಶರಣಾಗತವಾಯಿತು. ಗಾರಿಬಾಲ್ಡಿ ಸಣ್ಣ ಪಡೆಯೊಂದಿಗೆ ಬೆಟ್ಟಗಾಡು ಸೇರಿ ಆಸ್ಟ್ರಿಯನ್ನರಿಗೆ ಕಿರುಕುಳ ಕೊಡಲು ಯತ್ನಿಸಿದ. ಆದರೆ ವಿಫಲನಾಗಿ, ಗಡಿ ದಾಟಿ ಸ್ವಿಟ್‌ಜೆ಼ರ್ಲೆಂಡಿಗೆ ಹೋಗಿ ಅಲ್ಲಿಂದ ನೀಸ್ ತಲುಪಿದ.

ಇಟಲಿಯಲ್ಲಿ ಆಗ ಇನ್ನೂ ಕ್ರಾಂತಿಕಾರಿ ಸರ್ಕಾರಗಳು ಉಳಿದಿದ್ದುವು. ಆದರೆ ಅವು ಯಾವುವೂ ಗಾರಿಬಾಲ್ಡಿಯ ನೆರವನ್ನು ಬಯಸಲಿಲ್ಲ. 1848ರ ನವೆಂಬರಿನಲ್ಲಿ 9ನೆಯ ಪೋಪ್ ಪಯಸ್ ರೋಮಿನಿಂದ ಓಡಿಹೋದಾಗ ಗಾರಿಬಾಲ್ಡಿ ರೋಮಿನ ಜನರಿಂದ ಆಹ್ವಾನಿತನಾಗಿ ಅದನ್ನು ಪ್ರವೇಶಿಸಿ ಫ್ರೆಂಚರ ಆಕ್ರಮಣವನ್ನೆದುರಿಸಿದ. ಆಗ ಅವನ ಧೈರ್ಯಸಾಹಸಗಳೂ, ನಾಯಕತ್ವ ಗುಣವೂ, ಸಂಘಟನೆಯ ಚಾತುರ್ಯವೂ ಪ್ರಕಾಶಕ್ಕೆ ಬಂದುವು. ಆದರೂ ಕೊನೆಗೆ ಆ ನಗರ ಶತ್ರುಗಳ ವಶವಾಯಿತು. ಫ್ರಾನ್ಸ್, ಆಸ್ಟ್ರಿಯ, ಸ್ಪೇನ್, ನೇಪಲ್ಸ್ ಪಡೆಗಳು ಅವನನ್ನು ಬೆನ್ನಟ್ಟಿದುವು. ಗಾರಿಬಾಲ್ಡಿ ಹೆದರದೆ, ಶರಣಾಗದೆ ಹಿನ್ನಡೆದು ತಪ್ಪಿಸಿಕೊಂಡು ಅಮೆರಿಕಕ್ಕೆ ಹೋದ. ಸ್ವಾತಂತ್ರ್ಯ ಯೋಧನೆಂದೂ, ಎರಡು ಪ್ರಪಂಚಗಳ ವೀರನೆಂದೂ ಗಾರಿಬಾಲ್ಡಿ ಪ್ರಖ್ಯಾತನಾದ.

ಸ್ವಾತಂತ್ರ್ಯದ ಎರಡನೆ ಯುದ್ಧ

[ಬದಲಾಯಿಸಿ]

1854ರಲ್ಲಿ ಇಟಲಿಗೆ ಹಿಂದಿರುಗಲು ಅವನಿಗೆ ಅವಕಾಶ ದೊರಕಿತು. ಕಾರ್ಸಿಕ ಸಾರ್ದೆನ್ಯಾಗಳ ನಡುವಣ ಕಾಪ್ರೇರಾ ದ್ವೀಪದ ಒಂದು ಭಾಗವನ್ನು ಕೊಂಡ. ಅಲ್ಲೆ ನೆಲಸುವುದು ಅವನ ಉದ್ದೇಶವಾಗಿತ್ತು. ಅಷ್ಟರಲ್ಲಿ ಮತ್ತೆ ಹೋರಾಟಕ್ಕೆ ಕರೆ ಬಂತು. ಸಾರ್ದೆನ್ಯಾಗೆ ಆಗ ಕಾವೂರ್ ಪ್ರಧಾನಿಯಾಗಿದ್ದ. ಆಸ್ಟ್ರಿಯಾದ ವಿರುದ್ಧವಾಗಿ ಮಾಡಲಿದ್ದ ಯುದ್ಧದಲ್ಲಿ ಗಾರಿಬಾಲ್ಡಿಯ ನೆರವು ಬಯಸಿದ. ಅಲ್ಲಿಯ ದೊರೆಗೆ ನೆರವು ನೀಡಲು ಗಾರಿಬಾಲ್ಡಿ ಸಿದ್ಧನಿದ್ದನಾದರೂ ದೇಶಭ್ರಷ್ಟನೆನಿಸಿದ್ದ ಅವನಿಗೆ ಮನ್ನಣೆ ನೀಡುವುದು ಕಷ್ಟವಾಗಿತ್ತು. ಅಲ್ಲದೆ ಕಾವೂರ್ ಗಾರಿಬಾಲ್ಡಿಗಳ ಉದ್ದೇಶಗಳು ಪರಸ್ಪರ ಭಿನ್ನವಾಗಿದ್ದುವು. ಆದರೂ ಕೊನೆಗೆ ಅವರ ನಡುವೆ ಒಪ್ಪಂದವಾಯಿತು. ದೊರೆ ವಿಕ್ಟರ್ ಇಮ್ಯಾನ್ಯುಯೆಲ್‌ನ ಅಡಿಯಲ್ಲಿ ಗಾರಿಬಾಲ್ಡಿ ಮೇಜರ್ ಜನರಲ್ ಆದ. ಅವನ ಸ್ವಯಂಯೋಧರ ಪಡೆ ಆಸ್ಟ್ರಿಯನ್ ಸೇನೆಯ ಹಾದಿ ತಪ್ಪಿಸಿ ಕಾದಿ ಅದನ್ನು ಸೋಲಿಸಿತು. ಆಲ್ಪ್ಸ್ ಪ್ರದೇಶ ವಿಮೋಚನೆಗೊಂಡಿತು.[] ಶಾಂತಿ ಕೌಲು ಏರ್ಪಟ್ಟಿತು. ಅನಂತರ ಗಾರಿಬಾಲ್ಡಿ ಟಸ್ಕನಿಯ ಕ್ರಾಂತಿಕಾರಿ ಸರ್ಕಾರಕ್ಕೆ ಸಹಾಯ ಸಲ್ಲಿಸಿದ. ಪೋಪ್ ರಾಜ್ಯದ ಮೇಲೂ ಏರಿಹೋಗಲು ಅವನು ಸಿದ್ಧನಾದ. ಅಷ್ಟರಲ್ಲಿ ದೊರೆ ಇಮ್ಯಾನ್ಯುಯೆಲ್‍ನಿಂದ ತಡೆ ಬಂತು. ಗಾರಿಬಾಲ್ಡಿ ಮೇಜರ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ. ಸವಾಯನ್ನೂ, ಗಾರಿಬಾಲ್ಡಿಯ ಜನ್ಮ ಸ್ಥಳವಾದ ನೀಸನ್ನೂ ಸಾರ್ದೆನ್ಯಾ ಸರ್ಕಾರ ಫ್ರಾನ್ಸಿಗೆ ಒಪ್ಪಿಸಿದ್ದರಿಂದ ಅವನಿಗೆ ಕೋಪ ಬಂತು. ಅಲ್ಲಿಯ ಪಾರ್ಲಿಮೆಂಟನ್ನು ಪ್ರವೇಶಿಸಿ ಈ ಕ್ರಮವನ್ನು ಪ್ರತಿಭಟಿಸಿದ.

೧೮೬೦ರ ದಂಡಯಾತ್ರೆ

[ಬದಲಾಯಿಸಿ]

ನೇಪಲ್ಸ್, ಸಿಸಿಲಿಗಳ ರಾಜನಾಗಿದ್ದ ಎರಡನೆಯ ಫ್ರಾನ್ಸಿಸನ ವಿರುದ್ಧ ಸಿಸಿಲಿಯ ಪ್ರಜೆಗಳು ಬಂಡಾಯ ಹೂಡಿದ್ದರು. ಗಾರಿಬಾಲ್ಡಿ 1860ರ ಮೇ ತಿಂಗಳಲ್ಲಿ ಸಿಸಿಲಿಯ ದಂಡಯಾತ್ರೆಗೆ ಎರಡು ಹಡಗುಗಳಲ್ಲಿ ಸುಮಾರು 1150 ಸ್ವಯಂ ಯೋಧರ ಮುಂದಾಳಾಗಿ ಜೆನೋವದಿಂದ ಹೊರಟ. ಅನಂತರ ಇವರು ಸಹಸ್ರರು (ಥೌಸಂಡ್ಸ್) ಎಂದು ಪ್ರಸಿದ್ಧರಾದರು. ಕೆಂಪಂಗಿ ಇವರ ಸಮವಸ್ತ್ರ. ವಿಕ್ಟರ್ ಎಮ್ಯಾನ್ಯುಯೆಲನ ಹೆಸರಿನಲ್ಲಿ ಸಿಸಿಲಿ ದ್ವೀಪದ ಸರ್ವಾಧಿಕಾರಿಯೆಂದು ಗಾರಿಬಾಲ್ಡಿ ಘೋಷಿತನಾದ. ಸಿಸಿಲಿಯಲ್ಲಿದ್ದ ಫ್ರಾನ್ಸಿಸನ 24,000 ಸೈನಿಕರನ್ನು ದಿಟ್ಟ ಹೋರಾಟದಿಂದ ಗಾರಿಬಾಲ್ಡಿ ಸೋಲಿಸಿದ. ಅನಂತರ ನೇಪಲ್ಸಿನ ಆಕ್ರಮಣಕ್ಕೆ ಹೋದ. ಅದೂ ಬಹುತೇಕ ಅವನ ವಶವಾಯಿತು. ವಿಕ್ಟರ್ ಎಮ್ಯಾನ್ಯುಯೆಲ್ ನೇಪಲ್ಸ್ ಪ್ರವೇಶಿಸಿದಾಗ ಅವನೊಂದಿಗೆ ಗಾರಿಬಾಲ್ಡಿಯೂ ಇದ್ದ. ಆದರೆ ದೊರೆಯ ಸನ್ಮಾನವನ್ನು ಸ್ವೀಕರಿಸಲೊಲ್ಲದೆ ಕಾಪ್ರೇರಾಗೆ ಹಿಂದಿರುಗಿದ.[]

ನಂತರದ ವರ್ಷಗಳು

[ಬದಲಾಯಿಸಿ]

ಗಾರಿಬಾಲ್ಡಿಗೆ ಅಧಿಕಾರದ ಆಸೆ ಸ್ವಲ್ಪವೂ ಇರಲಿಲ್ಲವಾದರೂ ಅವನ ಬಗ್ಗೆ ಇಟಲಿಯ ಸರ್ಕಾರ ಎಂದಿಗೂ ನೆಮ್ಮದಿಯಾಗಿರಲಿಲ್ಲ. ಗಾರಿಬಾಲ್ಡಿಯ ಅನುಯಾಯಿಗಳನ್ನು ಸರ್ಕಾರ ಅತ್ಯಂತ ನಿಕೃಷ್ಟವಾಗಿ ಕಾಣುತ್ತಿದ್ದದ್ದು ಗಾರಿಬಾಲ್ಡಿಗೆ ಕೋಪವನ್ನುಂಟುಮಾಡಿತು. ಗಾರಿಬಾಲ್ಡಿ ಗೆದ್ದ ಪ್ರಾಂತ್ಯಗಳ ಆಡಳಿತ ಸಮರ್ಪಕವಾಗಿರಲಿಲ್ಲ. ಆದ್ದರಿಂದ ಗಾರಿಬಾಲ್ಡಿ ಸರ್ಕಾರವನ್ನು ಕಟುವಾಗಿ ಟೀಕಿಸುತ್ತಿದ್ದ. ಇಟಲಿಯ ಏಕೀಕರಣ ಕಾರ್ಯವನ್ನು ಪೂರ್ಣಗೊಳಿಸುವುದು ಅವನ ಇಚ್ಛೆಯಾಗಿತ್ತು. ರೋಂ ವೆನಿಸ್‌ಗಳ ವಿರುದ್ಧ ಕಾರ್ಯಾಚರಣೆಯಲ್ಲಿ ಇಟಲಿಯ ಸರ್ಕಾರ ಅವನಿಗೆ ಹೆಚ್ಚಿನ ನೆರವು ನೀಡಲಿಲ್ಲ. ಗಾರಿಬಾಲ್ಡಿಯನ್ನೂ, ಅವನ ಅನುಯಾಯಿಗಳನ್ನೂ ಅದು ಬಂಧಿಸಿ ವಿಮೋಚನೆಗೊಳಿಸಿತು. ಗಾರಿಬಾಲ್ಡಿ 1864ರಲ್ಲಿ ಲಂಡನಿಗೆ ಹೋದಾಗ ಅವನಿಗೆ ಅದ್ಭುತವಾದ ಸ್ವಾಗತ ದೊರಕಿತು.[] 1867ರಲ್ಲಿ ಅವನು ಇನ್ನೊಮ್ಮೆ ರೋಮಿನ ಮೇಲೆ ಏರಿ ಹೋದ. ಸರ್ಕಾರ ಅವನನ್ನು ದಸ್ತಗಿರಿ ಮಾಡಿ ಕಾಪ್ರೇರಾಗೆ ಕಳುಹಿಸಿಕೊಟ್ಟಿತು. ಇಟಲಿಯ ಸರ್ಕಾರ ಅವನಿಗೆ ದಿಗ್ಬಂಧನ ವಿಧಿಸಲು ಹವಣಿಸುತ್ತಿದಾಗ ಅವನು ತಪ್ಪಿಸಿಕೊಂಡು ರೋಂ ಪ್ರದೇಶವನ್ನು ಹೊಕ್ಕ. ಅವನ ಪಡೆಗಳಿಗೆ ಸೋಲಾಯಿತು. ಅವನು ಇಟಲಿಯ ಎಲ್ಲೆಯನ್ನು ದಾಟಿ ಬಂದಾಗ ಸರ್ಕಾರ ಅವನನ್ನು ಮತ್ತೆ ದಸ್ತಗಿರಿ ಮಾಡಿ ಕಾಪ್ರೇರಾಗೆ ಕಳುಹಿಸಿತು. 1870ರಲ್ಲಿ ಗಾರಿಬಾಲ್ಡಿ ಇನ್ನೊಂದು ಸೇನೆಯನ್ನು ಸಜ್ಜುಗೊಳಿಸಿದ. ಫ್ರಾನ್ಸ್ - ಜರ್ಮನಿ ಯುದ್ಧದಲ್ಲಿ ಪ್ರಷಿಯ ವಿರುದ್ಧ ಫ್ರಾನ್ಸಿಗೆ ನೆರವು ನೀಡುವುದು ಉದ್ದೇಶವಾಗಿತ್ತು. ಅವನ ನೆರವು ತುಂಬ ಉಪಯುಕ್ತವೆನಿಸಿತು. ಬಾರ್ಡೋದ ರಾಷ್ಟ್ರೀಯ ಸಭೆಗೆ ಗಾರಿಬಾಲ್ಡಿ ಆಯ್ಕೆ ಹೊಂದಿದ. ಆದರೆ ಅದರಲ್ಲಿರಲಾರದೆ ರಾಜೀನಾಮೆ ಕೊಟ್ಟ. ಅನಂತರ ಅವನು ರಾಜಕೀಯದಲ್ಲಿ ವಿಶೇಷವಾದ ಪಾತ್ರ ವಹಿಸಲಿಲ್ಲ. ಗಾರಿಬಾಲ್ಡಿ 1882ರ ಜೂನ್ 2ರಂದು ತೀರಿಕೊಂಡ.

ಸಾಹಿತ್ಯ ಕೃತಿಗಳು

[ಬದಲಾಯಿಸಿ]

ಹರಿದು ಹಂಚಿ ಹೋಗಿದ್ದ ಇಟಲಿಯನ್ನು ಸಮಗ್ರ ರಾಷ್ಟ್ರವನ್ನಾಗಿ ಒಂದುಗೂಡಿಸಿದ ಅಪ್ರತಿಮ ಯೋಧ ಗಾರಿಬಾಲ್ಡಿ ತಾನಾಗಿ ಸಾಹಿತಿ ಆಗಬಯಸಿದವನಲ್ಲ; ಕತ್ತಿ ಹಿರಿದು ಹೋರಾಡಿದಷ್ಟು ಸುಲಭವಾಗಿ ಲೇಖನಿ ಹಿಡಿದು ಬರೆದವನಲ್ಲ. ಆದರೂ ಈ ಶೂರ ಸೈನಿಕ ಎರಡು ಬಾರಿ ಸಾಹಿತ್ಯ ರಚನೆಗೆ ಕೈಹಾಕಿದ್ದುಂಟು. ಅವನು ತನ್ನ ಸಾಹಸಮಯ ಬದುಕಿನ ವೈವಿಧ್ಯಪೂರ್ಣ ಕಥೆಯನ್ನು ಹೇಳಲು ಒಮ್ಮೆ ಕಾವ್ಯವನ್ನು, ಇನ್ನೊಮ್ಮೆ ಗದ್ಯವನ್ನು ಮಾಧ್ಯಮವಾಗಿ ಬಳಸಿದ. ಗಾರಿಬಾಲ್ಡಿಯ ಆತ್ಮಕಥೆಯಲ್ಲಿ ಎಷ್ಟು ಲೋಪ ದೋಷಗಳಿದ್ದರೂ ಅದ್ಭುತರಮ್ಯವೆನಿಸುವಂಥ ನೂರಾರು ಘಟನೆಗಳಿರುವ ಆ ಗ್ರಂಥ ಓದುಗರ ಕುತೂಹಲವನ್ನು ಕೆರಳಿಸುತ್ತದೆ. ಲೇಖಕ ವಿರಾಮವಾಗಿ ಕುಳಿತು ಸುಸಂಬದ್ಧವಾಗಿ ಬರೆದ ಸಾಹಿತ್ಯ ಕೃತಿಯಲ್ಲ ಅದು. ಗಾರಿಬಾಲ್ಡಿ ಅದನ್ನು ತನ್ನ ವ್ಯಾಪಕವಾದ ಸಮರ ಚಟುವಟಿಕೆಗಳ ನಡುವೆ ಅಲ್ಪಸ್ವಲ್ಪ ಬಿಡುವು ಸಿಕ್ಕಾಗ ಆಗಾಗ ಬರೆದು ಮುಗಿಸಬೇಕಾಯಿತು. ಇದರಲ್ಲಿ ಅವನು ದಕ್ಷಿಣ ಅಮೆರಿಕ, ಇಟಲಿ ಮತ್ತು ಫ್ರಾನ್ಸ್‌ಗಳಲ್ಲಿ ಕೈಕೊಂಡ ಅಸಾಧಾರಣ ದಂಡಯಾತ್ರೆಗಳನ್ನು, ಸಮರ ಸಾಹಸಗಳನ್ನು, ನೂರೆಂಟು ವೈವಿಧ್ಯಮಯ ಅನುಭವಗಳನ್ನು ನೇರ, ಸರಳ ಶೈಲಿಯಲ್ಲಿ ನಿರೂಪಿಸಿದ್ದಾನೆ. ಈ ಕಥನದಲ್ಲಿ ಅವನ ಉತ್ಕಟ ಸ್ವಾತಂತ್ರ್ಯಾಭಿಲಾಷೆ, ನಿರಂತರ ರಾಷ್ಟ್ರಾಭಿಮಾನ ಇವು ಎದ್ದು ತೋರುತ್ತವೆ. ಸೋಲು ಗೆಲುವುಗಳ ಏರಿಳಿತಕ್ಕೆ ಸಿಕ್ಕಿ ಹೊಯ್ದಾಡುತ್ತಿದ್ದ ಅವನ ಜೀವನದಲ್ಲಿ ಸಂಭವಿಸಿದ ಘಟನೆಗಳ ನಿರೂಪಣೆ ಅವನ ಮಾನಸಿಕ ತುಯ್ತವನ್ನು, ವ್ಯಗ್ರತೆಯನ್ನು ಯಥಾವತ್ತಾಗಿ ಪಡಿಮೂಡಿಸುವಂತಿವೆ. ಅತಿಭಾವುಕನೂ, ಭಾವೋದ್ವಿಗ್ನನೂ ಆದ ಯೋಧನ ಚಿಂತನಶೀಲತೆ ಅಲ್ಲಲ್ಲಿ ಪುಟಿದೆದ್ದು ನಿರೂಪಣೆಯ ಶೈಲಿಯನ್ನೂ ಕಾವ್ಯಮಯಗೊಳಿಸಿದೆ. ಆತ್ಮವೃತ್ತಾಂತವನ್ನು ತಿಳಿಸುವ ದಿ ಪೊಯೆಮ ಆಟೊಬಯೋಗ್ರಾಫಿಕೊ ಎಂಬ ಸರಳ ರಗಳೆಯ ನೀಳ್ಗವನದಲ್ಲಿ ಗಾರಿಬಾಲ್ಡಿ ತನ್ನ ಹಲವು ವೈಯಕ್ತಿಕ ಅನುಭವಗಳನ್ನು ತೋಡಿಕೊಂಡಿದ್ದಾನೆ. ಇದನ್ನು ಅವನು 1862ರಲ್ಲಿ ಕ್ಯಾಪ್ರೇರಾ ದ್ವೀಪದಲ್ಲಿದ್ದಾಗ ಬರೆದ. ರೋಮ್ ನಗರವನ್ನು ಶತ್ರುಗಳಿಂದ ವಿಮುಕ್ತಿಗೊಳಿಸಲು ಸ್ವಂತ ಪ್ರೇರಣೆಯಿಂದ ನಡೆಸಿದ ಹೋರಾಟ ವಿಫಲಗೊಂಡಾಗ ಅವನಿಗೆ ಉಂಟಾದ ಅತೀವ ನಿರಾಶೆ, ವೇದನೆ, ಕೋಪೋದ್ವೇಗಗಳನ್ನು ಇಲ್ಲಿ ವಿವರಿಸಿದ್ದಾನೆ. ಇದಲ್ಲದೆ ಅವನು ಬೇರೆ ಬೇರೆ ಕವನಗಳನ್ನೂ ಬರೆದನೆಂದು ಹೇಳುವುದುಂಟು. ಆದರೆ ಅವುಗಳಲ್ಲಿ ಹೆಚ್ಚು ಸಾಹಿತ್ಯಕ ಮೌಲ್ಯಗಳಿಲ್ಲವೆಂಬುದು ಸ್ಪಷ್ಟವಾಗಿದೆ. ಅವನು ತನ್ನ ನೀಳ್ಗವನವನ್ನು ಬರೆದದ್ದು ಸಹ ಮನರಂಜನೆಗಲ್ಲ. ಅದರಲ್ಲಿ ಉತ್ಕಟ ಸನ್ನಿವೇಶಗಳಲ್ಲಿ ಸೈನಿಕರನ್ನು ಹುರಿದುಂಬಿಸಲು ಬರೆದ ಯುದ್ಧ ಘೋಷಣೆಗಳಂಥ ಮಾತುಗಳು ಬರುತ್ತವೆ. ರಣದುಂದುಭಿಗಳ ಮೊರೆತವನ್ನು, ಉಕ್ಕುವ ಕಡಲಿನ ಕುದಿತವನ್ನು ಅಲ್ಲಿ ಕೇಳಬಹುದು. ಈ ಕವನದಲ್ಲಿ ಅವನ ರಾಗರಂಜಿತ ಶೈಲಿ ಆಗಾಗ ಭವ್ಯ ಔನ್ನತ್ಯ ಸಾಧಿಸುತ್ತದೆ. ಅವನು ಅಪಾಯದ ಪ್ರಪಾತದಲ್ಲಿ ತೂಗಾಡುತ್ತಿದ್ದರೂ ತನ್ನ ಧೈರ್ಯಶೌರ್ಯಗಳನ್ನು ಪ್ರದರ್ಶಿಸುತ್ತ ತನ್ನ ಸೈನಿಕರನ್ನು, ಅನುಯಾಯಿಗಳನ್ನು ಹೇಗೆ ತನ್ನ ಸಮ್ಮೋಹಕ ವಾಕ್‌ಶಕ್ತಿಯಿಂದ ಸೆಳೆಯುತ್ತಿದ್ದನೆಂಬುದನ್ನು ಅವನ ಆತ್ಮಕಥೆಯ ನಿರೂಪಣೆಯಲ್ಲಿ ಗುರುತಿಸಬಹುದು. ಸೋತು ಹಿಮ್ಮೆಟ್ಟುತ್ತಿದ್ದ ಸೈನಿಕರನ್ನು ಕುರಿತು ಅವನು `ನನ್ನ ಹಿಂದೆ ಬರುವ ನೀವು ಹಸಿವು, ನೀರಡಿಕೆ, ಮುಗಿಯದ ಅಲೆತ, ಯುದ್ಧಗಳು, ಸಾವು - ಇವಕ್ಕೆ ಸಿದ್ಧರಾಗಿ ಬನ್ನಿ. ನಾನು ಬೇರೆ ಏನನ್ನೂ ನಿಮಗೆ ನೀಡಲಾರೆ' - ಎಂದು ಘೋಷಿಸಿದ್ದು ಲೋಕವಿಖ್ಯಾತವಾಗಿದೆ. ಗತ್ಯಂತರವಿಲ್ಲದೆ ಕಠೋರ ಸ್ಥಿತಿಯಲ್ಲಿ, ಹತಾಶನಾಗಿ ಮೆಂಟಾನಾ ನಗರವನ್ನು ಕೊನೆಯ ಸಲ ಮುತ್ತುವಾಗ ಅವನ ಸೈನಿಕರಿಗೆ `ಬನ್ನಿ ನನ್ನ ಜತೆ, ಸಾಯಲು ಸಿದ್ಧರಾಗಿ ಬನ್ನಿ, ಕಾದಿ ಸಾಯೋಣ ಬನ್ನಿ. ಸಾಯಲು ಹೆದುರುತ್ತೀರಾ? ಏಕೆ?' - ಎಂದು ಹೇಳಿದ ಮಾತುಗಳಲ್ಲಿ ಕಾವ್ಯದ ಅಸಾಧಾರಣ ಮಿಂಚಿದೆ.

ಉಪಸಂಹಾರ

[ಬದಲಾಯಿಸಿ]

ಗಾರಿಬಾಲ್ಡಿ ಚಿಂತನಪರನಾಗಿರಲಿಲ್ಲ. ಅವನು ಆವೇಶ ಭರದಲ್ಲಿ ಪರಸ್ಪರ ವಿರುದ್ಧವಾದ ಭಾವನೆಗಳನ್ನು ಬೋಧಿಸುತ್ತಿದ್ದದ್ದುಂಟು. ಶಾಸನಸಭೆಗಳಲ್ಲಿ ಅವನಿಗೆ ಹೆಚ್ಚಿನ ನಂಬಿಕೆ ಇರಲಿಲ್ಲ. ಶಾಸನಸಭೆಗಳಲ್ಲಿ ಅವನು ಹೆಚ್ಚು ಕಾಲ ಇರುತ್ತಿರಲಿಲ್ಲ. ಕೆಲವು ವಿಷಯಗಳು ಅವನಿಗೆ ಅರ್ಥವಾಗುತ್ತಿರಲಿಲ್ಲ. ಯೂರೋಪಿನಲ್ಲಿ ಶೀಘ್ರವಾಗಿ ಸಂಭವಿಸುತ್ತಿದ್ದ ರಾಜಕೀಯ ಬದಲಾವಣೆಗಳನ್ನು ಅವನು ಅರಿತುಕೊಳ್ಳಲಾರದೆ ಹೋದ. ಅವನು ಮೂಲತಃ ಯೋಧ. ಅಧಿಕಾರಕ್ಕೆ ಆಸೆ ಪಡದೆ ಇಟಲಿಯ ಏಕೀಕರಣ ಸಾಧನೆಗಾಗಿ ನಿರಂತರವಾಗಿ ಶ್ರಮಿಸಿ ಬಹುಮಟ್ಟಿಗೆ ಸಫಲನಾದ ಗಾರಿಬಾಲ್ಡಿಗೆ ಇಟಲಿಯ ಇತಿಹಾಸದಲ್ಲಿ ಹಿರಿಯ ಸ್ಥಾನವಿದೆ. ಇವನನ್ನು ಇಟಲಿಯ "ಪಿತೃಭೂಮಿಯ ಜನಕರು" ಇವರಲ್ಲಿ ಒಬ್ಬನೆಂದು ಪರಿಗಣಿಸಲಾಗುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Sardinia-Piedmont, Kingdom of, 1848-1849". www.ohio.edu. Retrieved 2023-01-19.
  2. "Cavour and the achievement of unity (1852–61)". LItaly in the Age of the Risorgimento 1790–1 (in ಇಂಗ್ಲಿಷ್). Routledge. 1983. pp. 53–78. doi:10.4324/9781315836836-12. ISBN 978-1-315-83683-6. Retrieved 2023-01-19.
  3. Ridley, Jaspar (2001). Phoenix: Garibaldi (illustrated, reprint ed.). London: Phoenix Press. ISBN 9781842121528.
  4. Arregui, Miguel. "Un aventurero italiano en la Guerra Grande". El Observador. Retrieved 2024-03-24.
  5. Marwil, Jonathan (2010). Visiting Modern War in Risorgimento Italy. New York: Palgrave Macmillan. p. 47. ISBN 978-0-23011-755-6.
  6. Godkin, 1880 p. 230
  7. Diamond, Michael (1932). Garibaldi a Malta. B. Cellini. pp. 143–161.
  8. Bouchard, Norma (2005). Risorgimento in Modern Italian Culture: Revisiting the Nineteenth-Century Past in History, Narrative, and Cinema. Madison: Fairleigh Dickinson University Press. p. 76. ISBN 978-0838640548.


ಗ್ರಂಥಸೂಚಿ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]




ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: