ಮೂಡುಬಿದಿರೆ
ಮೂಡುಬಿದಿರೆ (ತುಳು: ಬೆದ್ರ ,ಕೊಂಕಣಿ :ಬಿದ್ರ್ಯಾಂ)( ) ದಕ್ಷಿಣ ಕನ್ನಡ ಜಿಲ್ಲೆಯ ಒಂದು ಮುಖ್ಯ ಪಟ್ಟಣ. ಮಂಗಳೂರಿನಿಂದ ಪೂರ್ವಕ್ಕೆ ೩೬ ಕಿಲೋ ಮೀಟರುಗಳ ದೂರದಲ್ಲಿರುವ ಮೂಡುಬಿದಿರೆಯು ಕಾರ್ಕಳ-ಮಂಗಳೂರು, ಕಾರ್ಕಳ-ಬಂಟ್ವಾಳ ಮತ್ತು ಧರ್ಮಸ್ಥಳ-ಮಂಗಳೂರು ರಸ್ತೆಗಳನ್ನು ಹೊಂದಿದೆ. ೧೯೯೭ರಲ್ಲಿ ಅವಿಭಜಿತ ದಕ್ಷಿಣ ಕನ್ನಡವನ್ನು ವಿಭಾಗಿಸುವ ಮುನ್ನ ಮೂಡುಬಿದಿರೆಯು ಕಾರ್ಕಳ ತಾಲೂಕಿಗೆ ಒಳಪಟ್ಟಿತ್ತು. ಮೂಡುಬಿದಿರೆಯನ್ನು ಜೈನಕಾಶಿ ಎಂದು ಕರೆಯುತ್ತಾರೆ. ಇಲ್ಲಿ ೧೮ ದೇವಸ್ಥಾನಗಳು, ೧೮ ಜೈನ ಬಸದಿಗಳು ಮತ್ತು ೧೮ ಕೆರೆಗಳು ಇವೆ.[೧] ಇಲ್ಲಿನ ಬಸದಿಗಳಲ್ಲಿ ಸಾವಿರ ಕಂಬದ ಬಸದಿಯು ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.[೨] ಗುರು ಬಸದಿಯು ಜೈನರ ಪವಿತ್ರ ಗ್ರಂಥಗಳಾದ ಶ್ರೀಧವಳ ಮತ್ತು ಮಹಾ ಧವಳಗಳ ಹಸ್ತಪ್ರತಿಗಳನ್ನು ಹೊಂದಿದ್ದು, ಆ ಕಾರಣದಿಂದ ಸಿದ್ಧಾಂತ ಬಸದಿ ಎಂದೂ ಕರೆಯಲ್ಪಡುತ್ತದೆ.[೨]
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಇತಿಹಾಸ
[ಬದಲಾಯಿಸಿ]ಮೂಡುಬಿದಿರೆಯು ಹಲವು ನೂರು ವರ್ಷಗಳ ಹಿಂದೆ ಬಿದಿರು ಬೆಳೆಗೆ ಪ್ರಸಿದ್ಧವಾಗಿತ್ತು. ಪೂರ್ವದಿಕ್ಕಿನಲ್ಲಿ ಬಿದಿರು ಬೆಳೆಯುವ ಪಟ್ಟಣವಾದ್ದರಿಂದ ಮೂಡು (= ಪೂರ್ವ) ಬಿದಿರೆ ಎಂಬ ಹೆಸರು ಬಂತು. ಈ ಪಟ್ಟಣವನ್ನು ಸಂಸ್ಕೃತದಲ್ಲಿ ವೇಣುಪುರ ಎಂದು ಕರೆಯುತ್ತಿದ್ದರು. ವೇಣು ಅಂದರೆ ಸಂಸ್ಕೃತದಲ್ಲಿ ಬಿದಿರು ಎಂದೇ ಅರ್ಥವಿರುವುದರಿಂದ ಹಿಂದಿನ ಕಾಲದಿಂದಲೂ ಬಿದಿರು ಮತ್ತು ಈ ಪಟ್ಟಣದ ಹೆಸರು ಜೊತೆಯಾಗಿವೆ. ಇಲ್ಲಿಗೆ ಸಮೀಪದ ವೇಣೂರು ಪಟ್ಟಣವೂ ಕೂಡಾ ತನ್ನ ಹೆಸರಿನಲ್ಲಿ ಬಿದಿರಿನ ನಂಟು ಹೊಂದಿರುವುದು. ಹಿಂದೆ ಈ ಪ್ರದೇಶದಲ್ಲಿ ಬಿದಿರು ಸಮೃದ್ಧವಾಗಿ ಬೆಳೆಯಿತೆಂಬುದಕ್ಕೆ ಸಾಕ್ಷಿಯಾಗಿದೆ. ತುಳು ಭಾಷೆಯಲ್ಲಿ ಮೂಡುಬಿದಿರೆಯನ್ನು ಬೆದ್ರ ಎಂದು ಕರೆಯುವುದೂ ಕೂಡಾ ಬಿದಿರಿನ ನಂಟನ್ನು ಸೂಚಿಸುತ್ತದೆ.ಮೂಡುಬಿದಿರೆಯು ಹಿಂದೆ ಚೌಟ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿನ ಅರಮನೆಯಲ್ಲಿ ಇಂದಿಗೂ ಅರಸು ವಂಶಸ್ಥರು ವಾಸವಾಗಿದ್ದಾರೆ. ಜೈನ ವ್ಯಾಪಾರಿಗಳೂ ಮೂಡುಬಿದಿರೆಯಲ್ಲಿ ಸಾಕಷ್ಟಿದ್ದು, ದೇಶ ವಿದೇಶಗಳಲ್ಲಿ ವ್ಯಾಪಾರೀ ಸಂಬಂಧವನ್ನು ಹೊಂದಿದ್ದರು. ಇಲ್ಲಿನ ಜೈನ ವ್ಯಾಪಾರಿಗಳು ಸೇರಿ ಕಟ್ಟಿದ ಸಾವಿರ ಕಂಬದ ಬಸದಿಯು ಅತ್ಯಾಕರ್ಷಕ ವಾಸ್ತು ಕೃತಿ.
ಸಾಹಿತ್ಯ
[ಬದಲಾಯಿಸಿ]ಮಹಾಕವಿ ರತ್ನಾಕರ ವರ್ಣಿ ಮೂಡುಬಿದಿರೆಯವರು. ನಡುಗನ್ನಡದ ಪ್ರಖ್ಯಾತ ಕಾವ್ಯಗಳಲ್ಲೊಂದಾದ ಭರತೇಶ ವೈಭವ ಈತ ರಚಿಸಿದ ಪ್ರಮುಖ ಕೃತಿ.[೩] ಆಧುನಿಕರಲ್ಲಿ ಶಿಶುಪಾಲ ಪಾರ್ಶ್ವನಾಥ ಶಾಸ್ತ್ರಿ, ವಿದ್ವಾನ್ ಕಾಂತ ರೈ, ಸಿದ್ದಕಟ್ಟೆ ಚಂದ್ರಯ್ಯ ಶೆಟ್ಟಿ ಕೆಲವು ಸಾಹಿತಿಗಳು. ಪ್ರಚಲಿತದಲ್ಲಿ ಪಳಕಳ ಸೀತಾರಾಮ ಭಟ್ಟ, ಡಾ. ನಾ ಮೊಗಸಾಲೆ, ಇರ್ಶಾದ್ ಮೂಡುಬಿದಿರೆ, ಜಯಪ್ರಕಾಶ ಮಾವಿನಕುಳಿ, ಕವಿ ರಾಮಚಂದ್ರ ಪೈ ಹೆಚ್ಚಾಗಿ ಕೇಳಿ ಬರುವ ಹೆಸರುಗಳು. ಮೂಡುಬಿದಿರೆಯು ಬಹಳ ಹಿಂದಿನಿಂದಲೂ ಸಾಹಿತ್ಯಾಸಕ್ತರ ಬೀಡಾಗಿದೆ. ಇಲ್ಲಿನ ಸಮಾಜ ಮಂದಿರದಲ್ಲಿ ಊರ ಸಾಹಿತ್ಯಾಸಕ್ತರು ಸೇರಿ ಸ್ಥಾಪಿಸಿದ ಸರಸ್ವತೀ ಸಭಾ ಹಲವು ವರ್ಷಗಳವರೆಗೆ ದಸರಾ ದಿನಗಳಲ್ಲಿ ಪ್ರತಿ ದಿನವೂ ನಾಡ ಪ್ರಖ್ಯಾತ ಸಾಹಿತಿಗಳನ್ನು ಕರೆಸಿ ಏರ್ಪಡಿಸುತ್ತಿದ್ದ ಭಾಷಣಗಳನ್ನು ಊರ ಹಿರಿಯರು ಇಂದಿಗೂ ಮೆಲುಕು ಹಾಕುತ್ತಾರೆ. ಸಾರಸ್ವತ ಲೋಕದ ದಿಗ್ಗಜರೆಲ್ಲರೂ ಬಂದು ತಮ್ಮ ವಿದ್ವತ್ಪ್ರಭೆಯನ್ನು ಬೆಳಗಿ ಹೋದ ಸಮಾಜ ಮಂದಿರವು ಆ ಕಾಲದಲ್ಲಿ ಕನ್ನಡ ಪವಿತ್ರ ವೇದಿಕೆಯಾಗಿತ್ತು. ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಸರಸ್ವತೀ ಸಭಾದಿಂದ ಆಹ್ವಾನಿತರಾಗಿ ಭಾಷಣಗೈಯುವುದೆಂದರೆ ಹೆಮ್ಮೆಪಡುತ್ತಿದ್ದ ಕಾಲವದು. ೨೦೦೩ರಲ್ಲಿ ಕಮಲಾ ಹಂಪನಾ ಅವರ ಅಧ್ಯಕ್ಷತೆಯಲ್ಲಿ ನಡೆದ ೭೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಲ್ಲಿನ ಸಾಹಿತ್ಯ ಚಟುವಟಿಕೆಗಳಿಗೆ ಮುಕುಟವಿಟ್ಟಂತಿತ್ತು.[೪] ಈ ಹಿಂದೆ ೧೯೮೯ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನವೂ ಇಲ್ಲಿ ವೈಭವದಿಂದ ನಡೆದಿತ್ತು. ಮೂಡುಬಿದಿರೆಯ ಉತ್ಸಾಹಿ ವೈದ್ಯ ಡಾ. ಮೋಹನ ಆಳ್ವರು ಇತ್ತೀಚಿನ ವರ್ಷಗಳಲ್ಲಿ ಏರ್ಪಡಿಸುತ್ತಿರುವ ಆಳ್ವಾಸ್ ನುಡಿಸಿರಿ ಯಾವುದೇ ಸಾಹಿತ್ಯ ಸಮ್ಮೇಳನಗಳಿಗೂ ಕಡಿಮೆ ಇಲ್ಲದ ರೀತಿಯಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿದೆ. ಸಾಹಿತಿಗಳಿಗೂ ಸಾಹಿತ್ಯಾಸಕ್ತರಿಗೂ ಸೂಕ್ತ ವೇದಿಕೆ ಒದಗಿಸಿ ಕನ್ನಡ ಸರಸ್ವತಿಯ ಜಾತ್ರೆಯನ್ನು ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸುತ್ತಿರುವ ನುಡಿಸಿರಿ, ವರ್ಷಗಳುರುಳಿದಂತೆ ಹೆಚ್ಚಿನ ಕಳೆ, ಪ್ರಸಿದ್ಧಿ ಪಡೆದುಕೊಳ್ಳುತ್ತಾ ಸಾಹಿತ್ಯ ವಲಯದಲ್ಲಿ ಮೂಡುಬಿದಿರೆಯ ಹೆಸರನ್ನು ಮೇಲಕ್ಕೆತ್ತುತ್ತಿದೆ. ಇತ್ತೀಚೆಗೆ ವಿದ್ಯಾರ್ಥಿ ಸಿರಿಯನ್ನು ಆಯೋಜಿಸಲಾಗುತ್ತಿದೆ.
ಸಂಸ್ಕೃತಿ
[ಬದಲಾಯಿಸಿ]ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯು ನಾಗಾರಾಧನೆ, ಭೂತ ಕೋಲಗಳಂತಹ ಆಚರಣೆಗಳನ್ನೂ ಯಕ್ಷಗಾನ ಬಯಲಾಟ, ನಾಟಕಗಳನ್ನೂ, ಸಂಗೀತ, ನೃತ್ಯ ಕಲೆಗಳನ್ನೂ ಒಳಗೊಂಡಿದೆ. ಹಿಂದೂ ಧಾರ್ಮಿಕ ಹಬ್ಬಗಳಲ್ಲಿ ಸಾರ್ವಜನಿಕ ಗಣೇಶೋತ್ಸವ, ಶಾರದೋತ್ಸವ, ಮಹಾಕಾಳಿ ಮಾರಿಗುಡಿ ಜಾತ್ರೆಗಳನ್ನೂ, ಜೈನರಲ್ಲಿ ಸಾವಿರಕಂಭದ ಬಸದಿಯ ವಾರ್ಷಿಕೋತ್ಸವ, ಪದ್ಮಾವತಿ ಅಮ್ಮನವರ ಬಸದಿಯ ನವರಾತ್ರಿ ಉತ್ಸವಗಳನ್ನೂ ಮುಸ್ಲಿಮರ ಉರೂಸ್ ಮುಬಾರಕ್‍ಗಳನ್ನೂ ಕ್ರೈಸ್ತರ ಸಂತ ಮೇರಿ ಉತ್ಸವ, ಕ್ರಿಸ್‍ಮಸ್‍ಗಳನ್ನೂ ಆಚರಿಸುತ್ತಾರೆ. ಇಲ್ಲಿನ ಆಳ್ವಾಸ್ ಕಾಲೇಜಿನಲ್ಲಿ ಪ್ರತಿ ವರ್ಷ 'ಆಳ್ವಾಸ್ ವಿರಾಸತ್' ಮತ್ತು ಆಳ್ವಾಸ್ ನುಡಿಸಿರಿ ಕಾರ್ಯಕ್ರಮಗಳು ನಡೆಯುತ್ತವೆ. ಮೂಡುಬಿದಿರೆಯ ಕಡಲಕೆರೆಯ ಬಳಿ ನಿರ್ಮಿಸಲಾದ ಕಂಬಳದ ಗದ್ದೆಯಲ್ಲಿ ಪ್ರತಿ ವರ್ಷ ನಡೆಯುವ ಕಂಬಳ ನಡೆಯುತ್ತದೆ.
ಶಿಕ್ಷಣ
[ಬದಲಾಯಿಸಿ]- ಜೈನ ಪ್ರೌಢ ಶಾಲೆ ಮತ್ತು ಪದವಿಪೂರ್ವ ವಿದ್ಯಾಲಯ
- ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ[೫]
- ಶ್ರೀಮಹಾವೀರ ಮಹಾವಿದ್ಯಾಲಯ
- ಶ್ರೀಧವಳಾ ಮಹಾವಿದ್ಯಾಲಯ
- ದಿಗಂಬರ ಜೈನ ಪ್ರಾಥಮಿಕ ಶಾಲೆ
- ಬಾಬು ರಾಜೇಂದ್ರ ಪ್ರಸಾದ ಪ್ರೌಢ ಶಾಲೆ
- ಹೋಲಿ ರೋಸರಿ ಪ್ರೌಢ ಶಾಲೆ
- ಜ್ಯೋತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.
- ಎಕ್ಸಲೆಂಟ್ ಶಾಲೆ
- ವೈಬ್ರಂಟ್ ಶಾಲೆ
- ರೋಟರಿ ಆಂಗ್ಲ ಮಾದ್ಯಮ ಶಾಲೆ
- ಹೋಲಿ ರೋಸರಿ ಶಾಲೆ
- ಪ್ರಾಂತ್ಯ ಹಿರಿಯ ಪ್ರಾಥಮಿಕ ಶಾಲೆ
ಇವುಗಳು ಪ್ರಮುಖವಾದವು. ನಂತರದ ದಿನಗಳಲ್ಲಿ ಪ್ರಾಂತ್ಯ ಸರಕಾರಿ ಪ್ರೌಢ ಶಾಲೆ,ರೋಟರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಸಂತ ಥಾಮಸ್ ಶಾಲೆ,ಕಲ್ಲಬೆಟ್ಟು ಸರಕಾರಿ ಪ್ರಾಥಮಿಕ ಶಾಲೆ ಮತ್ತಿತರವು ಅಸ್ತಿತ್ವಕ್ಕೆ ಬಂದವು. ಎಂಭತ್ತರ ದಶಕದಲ್ಲಿ ಸ್ಥಾಪಿತವಾದ ಸರಕಾರಿ ಸಹಕಾರ ತರಬೇತಿ ಸಂಸ್ಥೆ,ಎಸ್ ಎನ್ ಮೂಡುಬಿದಿರೆ ಪಾಲಿಟೆಕ್ನಿಕ್,ಎ ಜಿ ಸೋನ್ಸ್ ಕೈಗಾರಿಕಾ ತರಬೇತಿ ಸಂಸ್ಥೆ, ಎಂ ಕೆ ಅನಂತರಾಜ ದೈಹಿಕ ಶಿಕ್ಷಣ ಮಹಾವಿದ್ಯಾಲಯಗಳು ವೃತ್ತಿಪರ ಶಿಕ್ಷಣಕ್ಕೂ ಅವಕಾಶ ಕಲ್ಪಿಸಿದವು. ತೊಂಭತ್ತರ ದಶಕದಲ್ಲಿ ಸ್ಥಾಪಿತವಾಗಿ ದೇಶಾದ್ಯಂತ ಹೆಸರು ಮಾಡಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಪದವಿಪೂರ್ವ ಮತ್ತು ಪದವಿ ವಿದ್ಯಾಲಯ, ದಾದಿಯರ ಶಿಕ್ಷಣ ಸಂಸ್ಥೆ, ಆಯುರ್ವೇದ ಮಹಾವಿದ್ಯಾಲಯ, ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯಗಳನ್ನೊಳಗೊಂಡಿವೆ.
ವಾಣಿಜ್ಯ
[ಬದಲಾಯಿಸಿ]ಮೂಡುಬಿದಿರೆಯ ವ್ಯಾಪಾರಿಗಳು ದೇಶ-ವಿದೇಶಗಳ ವಿವಿಧ ಸ್ಥಳಗಳ ವ್ಯಾಪಾರಿಗಳೊಂದಿಗೆ ವ್ಯವಹಾರ ಸಂಬಂಧ ಇಟ್ಟುಕೊಂಡಿದ್ದರೆಂದು ತಿಳಿದಿದೆ. ಇದಕ್ಕೆ ಸಣ್ಣ ಉದಾಹರಣೆಯಾಗಿ ಸಾವಿರ ಕಂಬದ ಬಸದಿಯ ಗೋಡೆಯ ಮೇಲೆ ಕೆತ್ತಲಾದ ಡ್ರಾಗನ್ ಪ್ರಾಣಿಯ ಉಬ್ಬು ಚಿತ್ರವನ್ನು ಗಮನಿಸಬಹುದು. ಆ ಕಾಲದಲ್ಲೇ ವ್ಯಾಪಾರಿಗಳು ಚೀನಾದೊಂದಿಗೆ ವ್ಯಾಪಾರ ಸಂಬಂಧವಿಟ್ಟುಕೊಂಡಿದ್ದರೆಂದು ಇದರಿಂದ ತಿಳಿಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮೂಡುಬಿದಿರೆ ಮತ್ತು ಆಸುಪಾಸಿನಲ್ಲಿ ಗೋಡಂಬಿ ಉದ್ಯಮ, ಕೃಷಿ, ಕೈಗಾರಿಕೆಗಳು, ಭತ್ತ, ಎಣ್ಣೆಯ ಗಾಣಗಳು, ಆಯುರ್ವೇದೀಯ ಔಷಧ ತಯಾರಿಕೆ ಇತ್ಯಾದಿಗಳು ಬೆಳೆದು ನಿಂತಿವೆ.
ಉಲ್ಲೇಖ
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2012-05-04. Retrieved 2016-08-01.
- ↑ ೨.೦ ೨.೧ https://www.youtube.com/watch?v=uZa9lVJ6ORA
- ↑ http://www.wow.com/wiki/Ratnakaravarni
- ↑ http://www.thehindu.com/thehindu/yw/2003/09/20/stories/2003092000390300.htm
- ↑ http://alvas.org/
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]http://www.moodabidri.com/ Archived 2016-08-18 ವೇಬ್ಯಾಕ್ ಮೆಷಿನ್ ನಲ್ಲಿ.