ಸ್ನೂಹಿ
ಗೋಚರ
ಸ್ನೂಹಿ ಎಂಬ ಸಂಸ್ಕೃತದಲ್ಲಿ ಹೊಂದಿರುವ ಮೂಲಿಕೆಯು ಕಳ್ಳಿಗಿಡದ ಒಂದು ವಿಧವಾಗಿದೆ.ಮಿಲ್ಕ್ ಬುಶ್,ಮಿಲ್ಕ್ ಹೆಜ್,ಎಂಬ ಆಂಗ್ಲ ಹೆಸರಿನ,ಯೂಪೋರಿಯಾ ನೆರ್ರಿಫೋಲಿಯಾ ಎಂಬ ವೈಜ್ಯಾನಿಕ ಹೆಸರಿನ ಈ ಗಿಡವು ಹೆಚ್ಚಾಗಿ ಬೇಲಿಯ ಮೇಲೆ ಕಂಡುಬರುವ ಮುಳ್ಳಿನ ಗಿಡವಾಗಿದೆ.೫-೨೦ ಅಡಿ ಬೆಳೆಯುವ ಈ ಗಿಡವು ೫-೧೦ ಇಂಚು ಉದ್ದದ ಮಾಂಸಲ ಎಲೆಗಳನ್ನು ಹೊಂದಿದೆ.ಇದರ ಕಾಂಡಗಳಲ್ಲೆಲ್ಲಾ ಅಧಿಕ ಮುಳ್ಳುಗಳಿವೆ.ಇದು ಉಷ್ಣ,ಗುರು ಗುಣಗಳನ್ನು ಹೊಂದಿದೆ.ಇದರ ಔಷಧೀಯ ಗುಣಗಳನ್ನು ಅರಿಯೋಣ:
- ಸ್ನೂಹಿ ಗಿಡದ ೧-೨ ಎಲೆಗಳನ್ನು ಬಿಸಿ ಮಾಡಿ,ಬಳಿಕ ಅರೆದು ಅದರ ರಸ ತೆಗೆಯಬೇಕು.ಇದಕ್ಕೆ ಸ್ವಲ್ಪ ಉಪ್ಪು ಬೆರೆಸಿ ದಿನಕ್ಕೆ ೨-೩ ಬಾರಿ ಸೇವಿಸಿದರೆ ಕೆಮ್ಮು ಕಫ ಶಮನವಾಗುತ್ತದೆ.
- ದೀರ್ಘಕಾಲದ ಉಬ್ಬಸ,ಕೆಮ್ಮು ಕಫದಿಂದ ಬಳಲುವವರು ಈ ಗಿಡದ ಕಾಂಡವನ್ನು ಜಜ್ಜಿ ತೆಗೆದ ರಸಕ್ಕೆ ಬೆಲ್ಲ ಬೆರೆಸಿ ನೀಡಿದರೆ ಹಿತಕಾರಿ.
- ಕಿವಿನೋವು ಇರುವಾಗ ಸ್ನೂಹಿಗಿಡದ ಹಾಲು ೨ ಹನಿಯಷ್ಟು ಕಿವಿಯಲ್ಲಿ ಹಾಕಿದರೆ ಕಿವಿನೋವು,ತುರಿಕೆ ಶಮನವಾಗುತ್ತದೆ.
- ಕಾಂಡದ ತುದಿಯ ಎಲೆಭಾಗ ತೆಗೆದುಕೊಂಡು ಬಿಸಿಮಾಡಿ,ಜಜ್ಜಿ ರಸ ತೆಗೆದು ಅದಕ್ಕೆ ಬೆಲ್ಲ ಬೆರೆಸಿ ಮಕ್ಕಳಿಗೆ ಸೇವಿಸಲು ನೀಡಿದರೆ ಕೆಮ್ಮು,ಕಫ ದಮ್ಮು ಶಮನವಾಗುತ್ತದೆ.
- ದೀರ್ಘಕಾಲೀನ ಕೆಮ್ಮು,ದಮ್ಮು ಹಾಗು ಶ್ವಾಸಾಂಗವ್ಯೂಹದ ತೊಂದರೆಗಳಿಂದ ಬಳಲುವವರು ಈ ಗಿಡದ ಭಾಗವನ್ನು ಕತ್ತರಿಸಿ ಮುಳ್ಳುಗಳನ್ನು ತೆಗೆದು ನಂತರ ತೊಳೆದು ಸಿಪ್ಪೆ ತೆಗೆದು ಹೆಚ್ಚಿ,ಬೇಯಿಸಿ ಮೆಣಸಿನ ಕಾಳಿನ ಹುಡಿ,ಉಪ್ಪು ಬೆರೆಸಿ ಸೇವಿಸಿದರೆ ಹಿತಕರ ಔಷಧೀಯ ಆಹಾರವಾಗಿದೆ.
- ಕಿವಿನೋವು ಇರುವಾಗ ಸ್ನೂಹಿಗಿಡದ ಹಾಲನ್ನು,ಸಾಸಿವೆ ಎಣ್ಣೆಯಲ್ಲಿ ಕುದಿಸಿ ೨ ಹನಿ ಹಾಕಿದರೆ ಶಮನಕಾರಿ.
- ಹತ್ತಿಯನ್ನು ಸ್ನೂಹಿಗಿಡದ ಹಾಲಿನಲ್ಲಿ ಅದ್ದಿ ಇದಬೇಕು. ಬಳಿಕ ಸುಟ್ಟು ಕರಕು ಮಾಡಿ, ಅದನ್ನು ಹಲ್ಲುನೋವಿರುವ ಭಾಗದಲ್ಲಿ ಇರಿಸಿದರೆ ನೋವು ಊತ ಶಮನವಾಗುತ್ತದೆ.
- ಕಪ್ಪು ಕಲೆಗಳಿಗೆ ಸ್ನೂಹಿಗಿಡದ ಹಾಲನ್ನು, ನಿತ್ಯ ಕೊಬ್ಬರಿ ಎಣ್ಣೆ ಬೆರೆಸಿ ಲೇಪಿಸಿ,ತಿಕ್ಕಿದರೆ ಕಪ್ಪು ಕಲೆಗಳು ಕ್ರಮೇಣ ನಿವಾರಣೆಯಾಗುತ್ತದೆ.
- ಸ್ನೂಹಿ ಗಿಡದ ಬೇರನ್ನು ತೊಳೆದು,ಅರೆದು,ಇಂಗಿನ ರಸ ಬೆರೆಸಿ ಸೇವಿಸಿದರೆ ಹೊಟ್ಟೆ ಹುಳಗಳ ಬಾಧೆ ನಿವಾರಣೆಯಾಗುತ್ತದೆ.
- ಸ್ನೂಹಿಗಿಡದ ಹಾಲನ್ನು ಅರಸಿನ ಹುಡಿಯೊಂದಿಗೆ ಬೆರೆಸಿ ಮೂಲವ್ಯಾಧಿಯ ಮೊಳಕೆಗಳಿಗೆ ಲೇಪಿಸಿದರೆ ಶಮನಕಾರಿ.
- ಮಂಸಖಂಡಗಳಲ್ಲಿ ನೋವು,ಊತವಿರುವಾಗ,ಸ್ನೂಹಿ ಗಿಡದ ಹಾಲು ಹಾಗು ಎಳ್ಳೆಣ್ಣೆಯನ್ನು ಲೇಪಿಸಿ ಮಾಲೀಶು ಮಾಡಿದರೆ ಶಮನಕಾರಿ.
- ಜಾಜಿಯ ಎಲೆಯೊಂದಿಗೆ ಸ್ನೂಹಿಗಿಡದ ಹಾಲನ್ನು ಅರೆದು ಗಾಯ,ವ್ರಣಗಳಿಗೆ ಲೇಪಿಸಿದರೆ ಶೀಘ್ರ ಗುಣಕಾರಿ.
- ತುರಿಕೆ,ಗುಳ್ಳೆ,ಕಜ್ಜಿ ಮೊದಲಾದ ಚರ್ಮದ ತೊಂದರೆಗಳಲ್ಲಿ ಸಾಸಿವೆ ಎಣ್ಣೆಯಲ್ಲಿ ಸಣ್ಣಗೆ ಕತ್ತರಿಸಿದ ಸ್ನೂಹಿಕಾಂಡದ ಭಾಗಗಳನ್ನು ಹಾಕಿ ಚೆನ್ನಾಗಿ ಕುದಿಸಿ,ಸೋಸಿ ಬಳಿಕ ಲೇಪಿಸಿದರೆ ತುರಿಕೆ,ಕಜ್ಜಿ,ಗುಳ್ಳೆ,ಪೂಯಯುಕ್ತ ವೃಣಗಳೂ ಶಮನವಾಗುತ್ತದೆ.
- ಸ್ನೂಹಿ ಗಿಡದ ಎಳೆಯ ಭಾಗವನ್ನು ತೊಳೆದು ಕತ್ತರಿಸಿ, ಬೇಯಿಸಿ,ಒಣದ್ರಾಕ್ಷೆ,ಒಣ ಅಂಜೂರಗಳೊಂದಿಗೆ ಸೇವಿಸಿದರೆ ರಕ್ತವೃದ್ಧಿಯಾಗುತ್ತದೆ.
- ಅಜೀರ್ಣ,ಅಪಚನ,ಅಗ್ನಿಮಾಂದ್ಯ ಮುಂತಾದ ಜೀರ್ಣಾಂಗ ವ್ಯೂಹದ ತೊಂದರೆಗಳಲ್ಲಿ ಸ್ನೂಹಿಗಿಡದ ಎಳೆಯ ಭಾಗವನ್ನು ಕತ್ತರಿಸಿ ತೊಳೆದು ಬೇಯಿಸಿ ಜೇನು ಹಾಗೂ ಹಸಿಶೂಂಠಿ ರಸದೊಂದಿಗೆ ಸೇವಿಸಲು ನೀಡಿದರೆ ಪಚನಕ್ರೀಯೆ ವರ್ಧಿಸುತ್ತದೆ,ಅಜೀರ್ಣ ನಿವಾರಣೆಯಾಗುತ್ತದೆ,ಹಸಿವು ಹೆಚ್ಚುತ್ತದೆ.
- ಸ್ನೂಹಿಗಿಡದ ಎಳೆಯ ಭಾಗಗಳನ್ನು ಬಳಿಕ ಸಣ್ಣತುಂಡುಗಳಾಗಿ ಕತ್ತರಿಸಿ ಅದನ್ನು ಸಿಪ್ಪೆ ತೆಗೆದು ಕತ್ತರಿಸಿದ ಪಪ್ಪಾಯದೊಂದಿಗೆ ಬೇಯಿಸಿ ಉಪ್ಪು ಬೆರೆಸಿ ಸೇವಿಸಿದರೆ ಉತ್ತಮ ಲಿವರ್ ಟಾನಿಕ್. ಯಕೃತ್ ತೊಂದರೆಗಳಲ್ಲಿ ಇದನ್ನು ನಿತ್ಯ ಸೇವಿಸುದರಿಂದ ಅರಸಿನ ಕಾಮಾಲೆ,ಯಕೃತ್ ಮೊದಲಾದ ತೊಂದರೆಗಳು ಶಮನವಾಗುತ್ತದೆ.
- ಚರ್ಮ ರೋಗದಿಂದ ದೀರ್ಘಕಾಲದಿಂದ ಬಳಲುವವರು ಬಾಳೆಹಣ್ಣಿನಲ್ಲಿ ಸ್ನೂಹಿಗಿಡದ ಹಾಲನ್ನು ೩-೪ ಹುಂಡುಗಳಷ್ಟು ಇರಿಸಿ ಸೇವಿಸಿದರೆ ಹಿತಕಾರಿ.ಅರಸಿನ ಹುಡಿ,ಎಳ್ಳೆಣ್ಣೆ,ತುಳಸೀರಸ ಹಾಗೂ ಸ್ನೂಹಿಗಿಡದ ಹಾಲು ಬೆರೆಸಿ ದೀರ್ಘಕಾಲೀನ ಚರ್ಮ ರೋಗಗಳಲ್ಲಿ ಲೇಪಿಸಿದರೆ ಶಮನಕಾರಿ.
ಚರಕ ಸಂಹಿತೆಯಲ್ಲಿ ಚರಕಾರ್ಯರು,ಸ್ನೂಹಿಗಿಡದ ಹಾಲನ್ನು ಸಂಗ್ರಹಿಸುವ ವಿಧಾನವನ್ನೂ ತಿಳಿಸಿದ್ದಾರೆ.೨-೩ ವರ್ಷ ಬೆಳೆದಿರುವ ಸ್ನೂಹಿಗಿಡದ ಕಾಂಡವನ್ನು ಕತ್ತರಿಸಿ ಅದರ ಹಾಲನ್ನು ಸಂಗ್ರಹಿಸಬೇಕು.ಶರದೃತುವಿನ ಕೊನೆಯಲ್ಲಿ ಸಂಗ್ರಹಿಸಿದ ಸ್ನೂಹಿಗಿಡದ ಹಾಲು ಶ್ರೇಷ್ಠ ಎನ್ನಲಾಗುತ್ತದೆ.
ಹೀಗೆ ಬೇಲಿಯ ಮೇಲೆ ಸಾಮಾನ್ಯವಾಗಿ ಎಲ್ಲೆಡೆ ಬೆಳೆಯುವ ಸ್ನೂಹಿಗಿಡವು ಆರೋಗ್ಯ ಸ್ನೇಹಿಯಾಗಿದೆ.