ಆಲ್ಟಾಯ್ಸೈಬೀರಿಯದ ನೈಋತ್ಯ ಭಾಗದಲ್ಲಿರುವ ಉನ್ನತ ಪರ್ವತ ಪ್ರಾಂತ್ಯ. ಇರ್ಟಸ್ ಮತ್ತು ಯೆನೆಸಿ ನದಿಗಳ ಮಧ್ಯ ಪ್ರದೇಶದಲ್ಲಿದ್ದು ಸ್ವಲ್ಪದೂರ ಮಂಗೋಲಿಯದ ಉತ್ತರಗಡಿಯವರೆಗೂ ಚಾಚಿದೆ. ಪಶ್ಚಿಮದ ಕಾಲಿವಾನ್ ಪರ್ವತಶ್ರೇಣಿ, ಆಗ್ನೇಯದ ಸೈಲ್ಯುಜಂ ಶ್ರೇಣಿ ಮತ್ತು ಕಟೂನ್ ಮತ್ತು ಚೂಯ ಆಲ್ಟ್ಸ್ ಶ್ರೇಣಿಗಳ ಮಧ್ಯಭಾಗಗಳೂ ಇದಕ್ಕೆ ಸೇರಿವೆ. 15,115' ಎತ್ತರವಿರುವ ಅತ್ಯುನ್ನತ ಶಿಖರ ಬೆಲೂಖ ಕಟೂನ್ ಆಲ್ಪ್ಸನಲ್ಲಿದೆ. ಇರ್ಟಿಷ್, ಓಬ್ ಮುಂತಾದ ನದಿಗಳಿಗೆ ನೀರನ್ನೊದಗಿಸುವ ನೀರ್ಗಲ್ಲುನದಿಗಳು (ಗ್ಲೇಷಿಯರ್)ಇಲ್ಲಿವೆ. ಉತ್ತರದ ಸಲೈರ್ ಮತ್ತು ಆಲಾ-ಟಾ ಬೆಟ್ಟಸಾಲುಗಳು, ಈಶಾನ್ಯದ ಸಯಾನ್ ಪರ್ವತಶ್ರೇಣಿ, ಪುರ್ವದ ಟೆನ್ನು-ಉಲಾ ಬೆಟ್ಟಗಳು ಮತ್ತು ಆಗ್ನೇಯದ ಮಂಗೋಲಿಯನ್ ಆಲ್ಪೈನ್ ಬೆಟ್ಟಗಳು ಇವೆಲ್ಲ ಇದರ ಶಾಖೆಗಳು. ಈ ಪ್ರದೇಶವೆಲ್ಲ ಆದಿಭೂಯುಗದ ಸ್ತರಗಳಿಂದ ಕೂಡಿ, ಸವೆತದಿಂದ ಪ್ರಸ್ಥಭೂಮಿಯಂತಾಗಿ, ಪುನಃ ನೆಲದುಬ್ಬರಕ್ಕೊಳಗಾಗಿದೆ. ಇಲ್ಲಿ ಖಂಡಾಂತರ ವಾಯುಗುಣವಿದೆ. ಆರು ಸಾವಿರ ಅಡಿ ಎತ್ತರದವರೆಗೂ ತಪ್ಪಲಿನಲ್ಲಿ ದಟ್ಟವಾದ ಕಾಡುಗಳಿವೆ. ಅಲ್ಲಿಂದ ಮೇಲೆ ಎಂಟು ಸಾವಿರ ಅಡಿ ಎತ್ತರದವರೆಗೆ ಹುಲ್ಲುಗಾವಲು ; ಅದಕ್ಕೂ ಮೇಲೆ ಹಿಮಾಚ್ಛಾದಿತ ಶಿಖರಗಳು. ಸವೆದ ಪರ್ವತಭಾಗಗಳನ್ನು ಒಳಗೊಂಡ ಈ ಪ್ರದೇಶದಲ್ಲಿ ಬೆಳ್ಳಿ, ತಾಮ್ರ, ಪಾದರಸ, ಚಿನ್ನ, ಸೀಸ ಮುಂತಾದ ಲೋಹಗಳು ವಿಪುಲವಾಗಿ ದೊರಕುತ್ತವೆ. ಲೆನಿನೊಗಾರ್್ಸ್ಕ ಪ್ರಧಾನ ಗಣಿಕೇಂದ್ರ. ಟಂಗ್ಸ್ಟನ್ನಿನ ಅದುರು ಕೋಲಿವನ್ ಎಂಬಲ್ಲಿ ವಿಶೇಷವಾಗಿದೆ. ಇಲ್ಲಿನ ನಿವಾಸಿಗಳ ಮುಖ್ಯ ಕಸುಬು ಬೇಟೆಯಾಡುವುದು, ಪಶುಪಾಲನೆ ಮತ್ತು ಕೃಷಿ. ರಾಜಧಾನಿ ಬರ್ನೌಲ್.